ಬೆಂಗಳೂರು:ರಾಜ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಜಾರಿ ಮಾಡುವುದಿಲ್ಲ. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಸ್ಥಿತಿ ಎದುರಾಗಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಕಲ್ಲಿದ್ದಲು ಕೊರತೆ ನಮ್ಮ ರಾಜ್ಯದಲ್ಲಿಲ್ಲ. ನಮ್ಮ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳ ದೈನಂದಿನ ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಸರಬರಾಜಾಗುತ್ತಿದೆ. ಸದ್ಯಕ್ಕೆ ನಮಗೆ ಕಲ್ಲಿದ್ದಲು ಕೊರತೆ ಎದುರಾಗಿಲ್ಲ ಎಂದು ಸದನಕ್ಕೆ ತಿಳಿಸಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ, ಅಂತಹ ಸ್ಥಿತಿ ಎದುರಾಗಿಲ್ಲ, ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿದೆ. ಎಲ್ಲಿಯಾದರೂ ರೈತರಿಗೆ ವಿದ್ಯುತ್ ಪೂರೈಕೆ ಸಮಸ್ಯೆ ಆಗಿದ್ದಲ್ಲಿ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಸವನಬಾಗೇವಾಡಿಯಲ್ಲಿ ಬಸವೇಶ್ವರ ಜಯಂತಿ ವಿಚಾರವಾಗಿ ಮಾತನಾಡಿದ ಸಚಿವರು, ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಬಸವೇಶ್ವರ ಜಯಂತಿ ಆಚರಿಸಲು ಸರ್ಕಾರ ಸಿದ್ಧವಾಗಿದ್ದು, ಮಹಾಪುರುಷರ ರಾಜ್ಯಮಟ್ಟದ ಜಯಂತಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿಯೇ ಆಚರಿಸಬೇಕು ಎಂಬ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.