ಬೆಂಗಳೂರು:ಕೊಡಗಿನಲ್ಲಿ ಗುರುವಾರ ನೆರೆ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ನಂತರ ಹೆಚ್ಚಿನ ಭದ್ರತೆ ನೀಡುವುದಾಗಿ ತಿಳಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಇದಕ್ಕೆ ಸಾಕ್ಷಿಯಂಬಂತ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಮಾಜಿ ಮುಖ್ಯಮಂತ್ರಿಗಳೂ ಆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂಬಂಧ ಪೊಲೀಸ್ ಇಲಾಖೆಗೂ ಸೂಚನೆ ನೀಡಿದ್ದರು. ಅಂತೆಯೇ, ಶುಕ್ರವಾರ ಸಿದ್ದರಾಮಯ್ಯ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.
ಆದರೆ, ಬೆಂಗಳೂರಿನಲ್ಲಿಂದು ವಿಶೇಷ ಅಥವಾ ಹೆಚ್ಚಿನ ಭದ್ರತಾ ವ್ಯವಸ್ಥೆ ಕಂಡು ಬರಲಿಲ್ಲ. ಎಂದಿನಂತೆಯೇ ನೀಡುತ್ತಿದ್ದ ಒಂದು ಎಸ್ಕಾರ್ಟ್ ಹಾಗೂ ಒಂದು ಪೈಲಟ್ ಟೀಂ ಮಾತ್ರ ನೀಡಲಾಗಿತ್ತು. ಭದ್ರತೆಗೆ ಒಟ್ಟು 10 ಮಂದಿ ಅಂಗ ರಕ್ಷಕರು ಮಾತ್ರ ಹಾಜರಾಗಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ತೆರಳಿದಾಗ ಮಾತ್ರ ಈ ವಿಶೇಷ ಭದ್ರತೆ ಒದಗಿಸಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ.
ಮಾಜಿ ಸಿಎಂಗೆ ಮೂರು ಬಾರಿ ಬೆದರಿಕೆ ಪತ್ರ:ಮಾಜಿ ಸಿಎಂಸಿದ್ದರಾಮಯ್ಯ ಅವರಿಗೆ ಈಗಾಗಲೇ ಮೂರು ಬಾರಿ ಬೆದರಿಕೆ ಪತ್ರ ಬಂದಿದೆ. ಇದರ ಜೊತೆ ಮೊನ್ನೆ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಹ ನಡೆದಿದೆ. ಇದರ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಳ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಭದ್ರತೆ ನೀಡುವುದಾಗಿ ಹೇಳಿದ್ದರು. ಇದರ ನಂತರವೂ ಸದ್ಯ ಯಾವುದೇ ಅಧಿಕೃತ ಉನ್ನತ ಶ್ರೇಣಿಯ ಭದ್ರತೆಯನ್ನು ನೀಡಿಲ್ಲ.
ಇದೇ ಪರಿಸ್ಥಿತಿ ಮುಂದುವರೆದರೆ ಹಾಗೂ ಮುಂದಿನ ದಿನಗಳಲ್ಲಿ ಅನಾಹುತಗಳಾದರೆ ಅದಕ್ಕೆ ಸರ್ಕಾರ ಹೊಣೆಯಾಗಬೇಕಾಗುತ್ತದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರವಾಸ ಮಾಡುವ ಸಂದರ್ಭದಲ್ಲಿ ಮಾತ್ರವೇ ಹೆಚ್ಚುವರಿ ಭದ್ರತೆಯನ್ನು ನೀಡಲು ಸರ್ಕಾರ ನಿರ್ಧಾರ ಮಾಡಿದೆಯೇ?. ಅಂದರೆ ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಅವರಿಗೆ ಅಪಾಯ ಇಲ್ಲ ಎಂದು ಅರ್ಥವೇ ಎಂದು ಕೆಲ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.