ಬೆಂಗಳೂರು:ರಾಜ್ಯದಲ್ಲಿ ಈವರೆಗೆ ಮಂಕಿಪಾಕ್ಸ್ ಪ್ರಕರಣ ಕಂಡು ಬಂದಿಲ್ಲ. ಆರಂಭದಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ವಿಶ್ವ ವ್ಯಾಸ್ಕ್ಯುಲರ್ ದಿನದ ಪ್ರಯುಕ್ತ, ವ್ಯಾಸ್ಕ್ಯುಲರ್ ಸರ್ಜನ್ಸ್ ಅಸೋಸಿಯೇಶನ್ ವತಿಯಿಂದ ಟೌನ್‌ಹಾಲ್‌ನಿಂದ ಕಂಠೀರವ ಸ್ಟೇಡಿಯಂವರೆಗಿನ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಂಕಿಪಾಕ್ಸ್ ಹಿನ್ನೆಲೆ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಬಂದಾಗ ಮಾರ್ಗಸೂಚಿಯನ್ನು ಪಾಲಿಸಬೇಕು. ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿಪಾಕ್ಸ್ ಅಲ್ಲ, ಸ್ಮಾಲ್ ಪಾಕ್ಸ್ ಎಂದು ದೃಢಪಟ್ಟಿದೆ ಎಂದರು.
ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಪ್ರಕರಣ ಕಂಡುಬಂದರೂ, ರಾಜ್ಯದಲ್ಲಿ ಈವರೆಗೆ ಪ್ರಕರಣ ಕಂಡುಬಂದಿಲ್ಲ. ಸ್ಕಿನ್ ರಾಶಸ್ ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿಪಾಕ್ಸ್ ಗೊತ್ತಾಗುತ್ತದೆ. ಆದರೂ ಕೋವಿಡ್‌ನಂತೆಯೇ ಇದು ಕೂಡ ಮೂರು ನಾಲ್ಕು ದಿನಗಳಾದ ನಂತರ ಪತ್ತೆಯಾಗುತ್ತದೆ. ಇದು ಒಂದು ಚಿಂತಿಸುವ ವಿಷಯ ಎಂದರು.