ಬೆಂಗಳೂರು: ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಮಧ್ಯೆ ಯಾವುದೇ ಕಾರಣಕ್ಕೂ ಮೈತ್ರಿ ಆಗಬಾರದು. ಆ ಮೈತ್ರಿ ಚುನಾವಣೆಯನ್ನು ಹಾಳು ಮಾಡುತ್ತವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರೋಲ್ ಬಾಂಡ್ ಖರೀದಿ ವ್ಯವಸ್ಥೆ ಸ್ಥಗಿತ ಆಗಬೇಕು ಎಂದರು.
2018ರಲ್ಲಿ ಬಿಜೆಪಿ ಪಕ್ಷಕ್ಕೆ 80% ಎಲೆಕ್ಟ್ರೋಲ್ ಬಾಂಡ್ ಬಂದಿದ್ದರೆ, ಕಾಂಗ್ರೆಸ್‌ಗೆ 9% ಬಂದಿತ್ತು. ಹೀಗಾಗಿ ರಾಜಕೀಯ ಪಕ್ಷಗಳ ಜೊತೆ ಕಾರ್ಪೊರೇಟ್ ಸಂಸ್ಥೆಗಳ ಮೈತ್ರಿಯನ್ನು ತಪ್ಪಿಸಬೇಕು ಎಂದು ಅಭಿಪ್ರಾಯಪಟ್ಟರು. ಈಗ ಹೊಸ ರೋಗ ಶಾಸಕರ ಆಪರೇಷನ್ ಶುರುವಾಗಿದೆ. ಹಾಗಾಗಿ ಒಂದು ಪಕ್ಷದಿಂದ ಗೆದ್ದರೆ ಪಕ್ಷ ನಿಷ್ಠೆ ಇರಬೇಕು. ಅರ್ಧದಲ್ಲಿ ಒಂದು ವೇಳೆ ಪಕ್ಷಾಂತರ ಮಾಡಿದರೆ, ಅಂತವರಿಗೆ 10 ವರ್ಷಗಳ ಕಾಲ ಚುನಾವಣೆಯಲ್ಲಿ ನಿಲ್ಲುವ ಅವಕಾಶ ನೀಡಬಾರದು. ಇದಕ್ಕೆ ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತರಲಿ ಎಂದು ಒತ್ತಾಯಿಸಿದರು.
ಒಂದು ರಾಷ್ಟ್ರ ಒಂದು ಚುನಾವಣೆ ತರಲು ಸಾಧ್ಯವಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಅದು ಮಾರಕವಾಗಲಿದೆ. ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಆಗ ರಾಷ್ಟ್ರಪತಿ ಆಳ್ವಿಕೆ ಇರಬೇಕು. ಇನ್ನೊಂದು ಚುನಾವಣೆ ಆಗುವವರೆಗೆ ರಾಷ್ಟ್ರಪತಿ ಚುನಾವಣೆ ಇರಲು ಅಸಾಧ್ಯ. ಒಂದು ರಾಷ್ಟ್ರ ಒಂದು ಚುನಾವಣೆ ವಾಸ್ತವದಲ್ಲಿ ಅಸಾಧ್ಯ ಎಂದು ತಿಳಿಸಿದರು.