ಬೆಂಬಲಿಗರ ಪಡೆಯಿಲ್ಲ, ಆಪ್ತರ ಸುಳಿವಿಲ್ಲ: ಒಬ್ಬಂಟಿಯಾಗಿ ಕಾಲ ಕಳೆದ ಸಿಎಂ! - ಯಡಿಯೂರಪ್ಪ ಸುದ್ದಿ
ನಾಯಕತ್ವ ಬದಲಾವಣೆ ಕುರಿತು ಸುದ್ದಿ ಬರುತ್ತಿದ್ದಂತೆ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸುತ್ತಿದ್ದ ಬೆಂಬಲಿಗರ ಪಡೆ ಸೋಮವಾರ ಸಿಎಂ ನಿವಾಸದತ್ತ ಸುಳಿಯಲಿಲ್ಲ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯೊಂದರಲ್ಲಿ ಭಾಗಿಯಾದ ಯಡಿಯೂರಪ್ಪ ನಂತರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಕಾಲ ಕಳೆದರು.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಿ ನಿವಾಸದಲ್ಲಿ ಮೌನ ಆವರಿಸಿದೆ. ಚಟುವಟಿಕೆ ನೀರಸಗೊಂಡಿದೆ. ಬೆಂಬಲಿಗರ ಸುಳಿಯಲಿಲ್ಲ, ಒಬ್ಟಂಟಿಯಾಗಿದ್ದ ಯಡಿಯೂರಪ್ಪ ಹೋಟೆಲ್ ಊಟಕ್ಕೆ ಆಸೆಪಟ್ಟು ಮಧ್ಯಾಹ್ನದ ಭೋಜನವನ್ನು ಹೋಟೆಲ್ನಲ್ಲಿ ಸವಿದು ಬಂದರು.
ನಾಯಕತ್ವ ಬದಲಾವಣೆ ಕುರಿತು ಸುದ್ದಿ ಬರುತ್ತಿದ್ದಂತೆ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸುತ್ತಿದ್ದ ಬೆಂಬಲಿಗರ ಪಡೆ ಸೋಮವಾರ ಸಿಎಂ ನಿವಾಸದತ್ತ ಸುಳಿಯಲಿಲ್ಲ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆಯೊಂದರಲ್ಲಿ ಭಾಗಿಯಾದ ಯಡಿಯೂರಪ್ಪ ನಂತರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಕಾಲ ಕಳೆದರು.
ನಾಯಕತ್ವ ಬದಲಾವಣೆ ಕುರಿತು ವಿದ್ಯಮಾನಗಳು ನಡೆಯುತ್ತಿದ್ದು, ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದರೂ ಬಿಎಸ್ವೈ ಬೆಂಬಲಿಗರು ಕಾವೇರಿಯತ್ತಾ ಮುಖ ಮಾಡಲಿಲ್ಲ, ಕೃಷ್ಣಾಗೂ ಬರಲಿಲ್ಲ, ಇದ್ದಲ್ಲಿಂದಲೇ ಕೆಲವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ಸುಮ್ಮನಾದರು. (ಸಿಎಂಗೆ ವೀರಶೈವ ಮಹಾಸಭಾ ಬೇಷರತ್ ಬೆಂಬಲ ಘೋಷಣೆ.. ಇತಿಹಾಸ ನೆನಪಿಸಿ ಬಿಜೆಪಿಗೆ ಎಚ್ಚರಿಕೆ..)
ಎಂದಿನಂತೆ ಸಚಿವರಾದ ಅಶೋಕ್ ಮತ್ತು ಬೊಮ್ಮಾಯಿ ಬಂದು ಮಾತನಾಡಿ ಕೆಲ ಸಮಯ ಕಳೆದರು. ಬೊಮ್ಮಾಯಿ ನಿರ್ಗಮನದ ನಂತರ ಅಶೋಕ್ ಕೆಲಕಾಲ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಸಿಎಂ ಯಡಿಯೂರಪ್ಪ ಹೋಟೆಲ್ನಲ್ಲಿ ಊಟ ಮಾಡಬೇಕು ಎನಿಸುತ್ತಿದೆ ಎಂದು ಅಶೋಕ್ಗೆ ಹೇಳಿದರಂತೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಂತಹ ಚಟುವಟಿಕೆ ನಡೆಯುತ್ತಿರುವ ವೇಳೆ ಯಡಿಯೂರಪ್ಪ ಹಾಗೂ ತಾವು ಇಬ್ಬರೇ ಹೋಟೆಲ್ಗೆ ಹೋಗಿ ಊಟ ಮಾಡಿ ಬಂದಿದ್ದು ಬಹಿರಂಗವಾದರೆ ರಾಜಕೀಯವಾಗಿ ಬೇರೆಯ ಸಂದೇಶವೇ ರವಾನೆಯಾಗಲಿದೆ ಎನ್ನುವ ಆತಂಕಕ್ಕೆ ಸಿಲುಕಿದ ಅಶೋಕ್, ಕೂಡಲೇ ಬೊಮ್ಮಾಯಿ, ಬಿ.ಸಿ.ಪಾಟೀಲ್ ಸೇರಿ ಕೆಲವರನ್ನು ಕರೆಸಿಕೊಂಡು ಎಲ್ಲರೂ ಒಟ್ಟಾಗಿ ಹೋಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಭೋಜನ ಮಾಡಿದ್ದಾರೆ.
ಭೋಜನದ ವೇಳೆ ಅರ್ಧ ಗಂಟೆಗೂ ಹೆಚ್ಚಿನ ಸಮಯ ಸಿಎಂ ಯಡಿಯೂರಪ್ಪ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಶರಣಾಗಿದ್ದರು. ಭೋಜನದ ನಂತರವೂ ಮೌನವೇ ಮಾತಾಗಿತ್ತು. ಬಳಿಕ ತಾಜ್ ವೆಸ್ಟ್ ಎಂಡ್ ಹಿಂಭಾಗದ ಗೇಟ್ ಮೂಲಕ ಸಿಎಂ ಕಾವೇರಿಗೆ ವಾಪಸ್ಸಾದರು. ಸಂಜೆಯವರೆಗೂ ಒಬ್ಬರೇ ಕಾಲ ಕಳೆದರು.
ಒಟ್ಟಿನಲ್ಲಿ ಯಾವಾಗಲೂ ಚಟುವಟಿಕೆಯ ತಾಣವಾಗಿ ಲವಲವಿಕೆಯಿಂದ ಕೂಡಿರುತ್ತಿದ್ದ ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಮಾತ್ರ ಮೌನ ಆವರಿಸಿತ್ತು. ಏಕಾಂಗಿಯಾಗಿ ಸಿಎಂ ಕಾಲ ಕಳೆಯುವಂತಾಯಿತು. ಇದೆಲ್ಲಾ ಬದಲಾವಣೆ ಪರ್ವದ ಆರಂಭಕ್ಕೆ ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತಿದೆ.