ಬೆಂಗಳೂರು:ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗ್ರಾಹಕರು ಸಿಕ್ಕಿಬಿದ್ದರೆ ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದು ಕೋರಿ ಬೆಂಗಳೂರಿನ ಎಸ್. ಬಾಬು ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಪೊಲೀಸರು ಶೋಧ ನಡೆಸಿದಾಗ ಅರ್ಜಿದಾರರು ವೇಶ್ಯಾವಾಟಿಕೆಯಲ್ಲಿದ್ದ ಗ್ರಾಹಕರು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ವೇಶ್ಯಾ ಗೃಹದಲ್ಲಿರುವ ಗ್ರಾಹಕನನ್ನು ಕ್ರಿಮಿನಲ್ ಮೊಕದ್ದಮೆಗಳಿಗೆ ಎಳೆಯಲಾಗದು ಎಂದು ನ್ಯಾಯಾಲಯ ಹಲವು ಬಾರಿ ಹೇಳಿದೆ. ಮಾನವ ಕಳ್ಳಸಾಗಣೆ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹವನ್ನು ಇಟ್ಟುಕೊಳ್ಳುವುದಕ್ಕೆ ಅಥವಾ ಆವರಣವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸುತ್ತದೆ ಎಂದರು.
ಓದಿ:ಜೋಡಿ ಕೊಲೆ ಪ್ರಕರಣ: ಬಾಲಾಪರಾಧಿಗೆ ಜಾಮೀನು ನೀಡಿದ ಹೈಕೋರ್ಟ್
ಸೆಕ್ಷನ್ 4 ಪ್ರಕಾರ ವೇಶ್ಯಾವಾಟಿಕೆಯಿಂದ ಹಣ ಗಳಿಕೆ ಮಾಡಿ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ. ಸೆಕ್ಷನ್ 5ರ ಪ್ರಕಾರ ವೇಶ್ಯಾವಾಟಿಕೆಗಾಗಿ ವ್ಯಕ್ತಿ ಸಾಗಣೆ, ಪ್ರಚೋದಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸೆಕ್ಷನ್ 6 ರಂತೆ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳದಲ್ಲಿ ವ್ಯಕ್ತಿಯನ್ನು ಬಂಧಿಸುವುದಾಗಿದೆ. ಆದರೆ, ಈ ಯಾವ ಚಟುವಟಿಕೆಗಳನ್ನು ಅರ್ಜಿದಾರರು ನಡೆಸಿದ್ದಾರೆಂಬುದನ್ನು ದೂರಿನಲ್ಲಿ ಆರೋಪಿಸಿಲ್ಲ. ಹಾಗಾಗಿ, ಪ್ರಕರಣ ಊರ್ಜಿತವಲ್ಲ ಎಂದು ಪೀಠ ಹೇಳಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2021ರ ಸೆಪ್ಟೆಂಬರ್ 23ರಂದು ಖಚಿತ ಮಾಹಿತಿ ಆಧರಿಸಿ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕಿಯೆ ಆರಂಭಿಸಿದ್ದರು. ದಾಳಿ ನಡೆಸಿದಾಗ ಆ ಮನೆಯ ಆವರಣದಲ್ಲಿ ಅರ್ಜಿದಾರರೂ ಇದ್ದರು. ಈ ಹಿನ್ನೆಲೆ ಅರ್ಜಿದಾರರ ವಿರುದ್ಧವೂ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ~ 1956ರ ಸೆಕ್ಷನ್ 3, 4, 5, 6 ಮತ್ತು ಸೆಕ್ಷನ್ 370 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದು ಕೋರಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.