ಬೆಂಗಳೂರು:ರಾಜ್ಯದಲ್ಲಿ ಆನ್‌ಲೈನ್ ಗೇಮ್ ಹಾಗು ಜೂಜು ನಿಷೇಧಿಸುವ ನಿಯಮಗಳನ್ನು ಜಾರಿ ಮಾಡಿದ್ದರೂ, ಸದ್ಯಕ್ಕೆ ಗೇಮಿಂಗ್ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.
ಕರ್ನಾಟಕ ಪೊಲೀಸ್ ಕಾಯ್ದೆ-2021ಕ್ಕೆ ತಿದ್ದುಪಡಿ ತಂದು ಆನ್‌ಲೈನ್ ಗೇಮ್ ನಿಷೇಧಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್, ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜೀಸ್ ಮತ್ತು ಇತರೆ ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರ ಈ ಭರವಸೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯದ ಶಾಸನವು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಷರತ್ತುಗಳ ಉಲ್ಲಂಘನೆಯಾಗಿದೆ. ಅಲ್ಲದೇ, ಸ್ಕಿಲ್ ಮತ್ತು ಚಾನ್ಸ್ ಎರಡು ಬಗೆಯ ಆಟಗಳಿವೆ. ನೀವು ಗೇಮ್ಗಳ ಸ್ಕಿಲ್ ತಡೆಯಲಾಗುವುದಿಲ್ಲ. ಆದರೆ ಕರ್ನಾಟಕ ಸರ್ಕಾರ ಗೇಮ್ನ ಸ್ಕಿಲ್ ಕೂಡ ಸೇರಿಸಿರುವುದು ಸುಪ್ರೀಂಕೋರ್ಟ್ ಆದೇಶಗಳಿಗೆ ವ್ಯತಿರಿಕ್ತವಾಗಿದೆ ಎಂದು ವಿವರಿಸಿದರು.
ವ್ಯಾಪಕ ವಾದ-ಪ್ರತಿವಾದದ ಬಳಿಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ತಾತ್ಕಾಲಿಕವಾಗಿ ಈ ಸಂಬಂಧ ಗೇಮಿಂಗ್ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಸರ್ಕಾರದ ಈ ಭರವಸೆಯಿಂದಾಗಿ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತಾಗಿದೆ. ಹೊಸ ಕಾಯ್ದೆ ಅನ್ವಯ ರಾಜ್ಯದಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.
ಅರ್ಜಿದಾರರ ಕೋರಿಕೆ
ಅರ್ಜಿದಾರರ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಆನ್‌ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಅಧಿಕಾರ ಇಲ್ಲ. ಸರ್ಕಾರದ ನಿರ್ಧಾರ ಸಂವಿಧಾನ ಬಾಹಿರ. ರಾಜ್ಯ ಸರ್ಕಾರ ನಮ್ಮ ವಾದ ಆಲಿಸದೆ ಏಕಪಕ್ಷೀಯವಾಗಿ ಆದೇಶ ಹೊರಡಿಸಿದ್ದು, ಇದರಿಂದ ಅರ್ಜಿದಾರರ ಕಂಪನಿಗಳಿಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಮತ್ತು ಅನಗತ್ಯವಾಗಿ ಪೊಲೀಸ್ ಕೇಸ್ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಪೊಲೀಸ್ ಕಾಯ್ದೆಗೆ ತಂದಿರುವ ತಿದ್ದುಪಡಿ ರದ್ದುಪಡಿಸಬೇಕು ಎಂದು ಕೋರಿವೆ.
ಇದನ್ನೂ ಓದಿ:ಆನ್‌ಲೈನ್ ಗೇಮ್ ನಿಷೇಧಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ : ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚನೆ