ಬೆಂಗಳೂರು:ರಾಜ್ಯದ ಖಾಸಗಿ ವಿವಿಗಳು ವೈದ್ಯಕೀಯ ಪದವಿ ಪ್ರಮಾಣಪತ್ರ ನೀಡದೆ ಇರುವುದು ಹಾಗು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೆಎಂಸಿ ನೋಂದಣಿ ಮಾಡದೇ ಇರುವ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ(NMC)ಕ್ಕೆ ದೂರು ನೀಡಲಾಗಿದೆ.
ಪ್ರಧಾನಿ ಕಚೇರಿಗೆ ಈ ಸಂಬಂಧ ದೂರು ನೀಡಲಾಗಿದ್ದು, ಆ ದೂರಗಳನ್ನು ಪ್ರಧಾನಿ ಕಚೇರಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ಕ್ಕೆ ಕಳುಹಿಸಿಕೊಟ್ಟಿದೆ. ಇದೀಗ ರಾಷ್ಟ್ರೀಯ ವೈದ್ಯಕೀಯ ಆಯೋಗ ಆ ದೂರನ್ನು ಕರ್ನಾಟಕ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿದ್ದು, ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ದೂರಿನಲ್ಲಿ 2018ರ ಬಳಿಕ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡುವಂತೆ ರಾಜ್ಯ ಸರ್ಕಾರ ನಿಯಮ ರೂಪಿಸಿದೆ. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಅಡ್ಮಿಷನ್ ವೇಳೆ ಇಂತಹ ನಿಯಮ ಇರುವ ಬಗ್ಗೆ ಮಾಹಿತಿ ನೀಡುವುದಿಲ್ಲ. ಡೀಮ್ಡ್ ವಿವಿ ವಿದ್ಯಾರ್ಥಿಗಳು ಈಗಾಗಲೇ ಪದವಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಆದರೆ, ಮೆಡಿಕಲ್ ಮುಗಿಸಿರುವ ಉಳಿದ ಪದವೀಧರರಿಗೆ ಪದವಿ ಪತ್ರಗಳು ಸಿಕ್ಕಿಲ್ಲ, ಕೆಲಸವೂ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಗ್ರಾಮೀಣ ಸೇವೆ ಮಾಡಲು ಸಿದ್ಧರಿದ್ದರೂ ಉದ್ಯೋಗ ಅಥವಾ ಪದವಿ ಪ್ರಮಾಣಪತ್ರ ಸಿಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ಗೆ ಕಳುಹಿಸಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.