ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಸ್ವಾಮೀಜಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ದೂರುದಾರ ಲೆನಿನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಫೆ. 5ಕ್ಕೆ ಕಾಯ್ದಿರಿಸಿದೆ.
ನಿತ್ಯಾನಂದ ಜಾಮೀನು ಷರತ್ತು ಉಲ್ಲಂಘಿಸಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಲೆನಿನ್ ಕುರುಪ್ಪನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತು.
ನಿತ್ಯಾನಂದ ಪರ ವಕೀಲರು ವಾದಿಸಿ, ಸ್ವಾಮೀಜಿ ಪರ ವಕೀಲರು ವಿಚಾರಣೆಗೆ ನಿರಂತರವಾಗಿ ಹಾಜರಾಗುತ್ತಿದ್ದಾರೆ. ಸದ್ಯದ ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿ ಹಾಜರಾಗುವ ಅಗತ್ಯವಿಲ್ಲ. ಹೀಗಾಗಿ ಅವರಿಗೆ ನೀಡಿರುವ ಜಾಮೀನು ವಿಚಾರವಾಗಿ ಕೋರ್ಟ್ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪೀಠ, ಜಾಮೀನು ರದ್ದು ಕೋರಿರುವ ಅರ್ಜಿ ಸಂಬಂಧ ಆರೋಪಿಗೆ ನೋಟಿಸ್ ಜಾರಿ ಮಾಡಲಾಗಿದೆಯೇ ಎಂದು ಪ್ರಶ್ನಿಸಿತು. ಈ ವೇಳೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿವೈಎಸ್ಪಿ ಬಾಲರಾಜ್ ನಿತ್ಯಾನಂದ ಸ್ವಾಮಿ ಆಶ್ರಮದಲ್ಲಿಲ್ಲ. ಹೀಗಾಗಿ ನಿತ್ಯಾನಂದ ಪರ ಆಶ್ರಮದ ಅಚಲಾನಂದ ಎಂಬುವರು ಸ್ವೀಕರಿಸಿದ್ದಾರೆ ಎಂದು ತಿಳಿಸಿದರು. ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳಿದ ಪೀಠಕ್ಕೆ ಉತ್ತರಿಸಿದ ಸರ್ಕಾರಿ ಅಭಿಯೋಜಕರು, ದೂರುದಾರ ಮತ್ತು ಸಾಕ್ಷಿಗಳ ಅಸಹಕಾರದಿಂದ ವಿಳಂಬವಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಲೆನಿನ್ ಪರ ವಕೀಲರು ವಾದಿಸಿ 2018ರ ಜೂ.5ರ ನಂತರ ನಿತ್ಯಾನಂದ ಕೋರ್ಟ್ ವಿಚಾರಣೆಗೆ ಹಾಜರಾಗಿಲ್ಲ. ನಿತ್ಯಾನಂದ ಪಡೆದಿದ್ದ ಪಾಸ್ ಪೋರ್ಟ್ ಅವಧಿ 2018ರ ಸೆ.20ಕ್ಕೆ ಮುಗಿದಿದೆ. ಹಾಗಿದ್ದೂ ಆರೋಪಿ ನಿತ್ಯಾನಂದ ಬೆಲ್ಲೀಸ್ ದೇಶದ ಪಾಸ್ ಪೋರ್ಟ್ ಪಡೆದು ದೇಶ ಬಿಟ್ಟು ಪರಾರಿಯಾಗಿದ್ದಾನೆ. ಹೈಕೋರ್ಟ್ ಜಾಮೀನು ನೀಡುವ ವೇಳೆ ಪರಿಧಿ ಮೀರಿ ಹೊರಹೋಗದಂತೆ ಷರತ್ತು ವಿಧಿಸಿತ್ತು. ಅದರಂತೆ ನಿತ್ಯಾನಂದ ದೇಶ ಬಿಟ್ಟು ಹೋಗುವಂತಿಲ್ಲ. ಹೀಗಾಗಿ ನಿತ್ಯಾನಂದಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.