ಕರ್ನಾಟಕ

karnataka

ETV Bharat / city

'ಸೋಲಿಲ್ಲದ ಸರದಾರ' ಮಾದೇಗೌಡರ ನಿಧನಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ - Nirmalanandanath Swamiji

ಶಾಸಕರಾಗಿ, ರಾಜ್ಯ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಸಚಿವರಾಗಿ, ಲೋಕಸಭಾ ಸದಸ್ಯರಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಡಾ. ಜಿ.ಮಾದೇಗೌಡರು ವಿಧಿವಶರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

Nirmalanandanath Swamiji
ನಿರ್ಮಲಾನಂದನಾಥ ಸ್ವಾಮೀಜಿ

By

Published : Jul 18, 2021, 6:54 AM IST

ಬೆಂಗಳೂರು: ಹಿರಿಯ ರಾಜಕಾರಣಿ, ಆಧುನಿಕ ಮಂಡ್ಯದ ಕೀರ್ತಿಯನ್ನು ಬೆಳಗಿದ ಡಾ. ಜಿ.ಮಾದೇಗೌಡರು ವಿಧಿವಶರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾದೇಗೌಡರು ಮಂಡ್ಯದ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ ಶಿಸ್ತಿಗೆ, ದಕ್ಷತೆಗೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ಸತತ ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾದವರು. ಶಾಸಕರಾಗಿ, ರಾಜ್ಯ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಸಚಿವರಾಗಿ, ಲೋಕಸಭಾ ಸದಸ್ಯರಾಗಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಶ್ರೀಯುತರು ತಾವು ಮಾಡಿದ ಸಂಕಲ್ಪವನ್ನು ಸಂಪೂರ್ಣವಾಗಿ ಸಾಕಾರಗೊಳಿಸಿರುವುದನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಳಮುದ್ದನ ದೊಡ್ಡಿಯ ಸನಿಹದಲ್ಲಿರುವ ಹನುಮಂತನಗರದಲ್ಲಿ ಕಾಣಬಹುದು ಎಂದು ಬಣ್ಣಿಸಿದ್ದಾರೆ.

ಮಾಧ್ಯಮ ಪ್ರಕಟಣೆ

ರೈತರ ಹಿತ ಕಾಯುವಲ್ಲಿ ಗೌಡರು ಮುಂಚೂಣಿ:ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ ಧೀಮಂತರು. ಕೆ.ಎಂ.ದೊಡ್ಡಿಯಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವುದರಲ್ಲಿಯೂ ಗೌಡರ ಪ್ರಯತ್ನ ಎಂದಿಗೂ ಸ್ಮರಣೀಯ. ಮಂಡ್ಯದ ಮೈಶುಗರ್ ಕಂಪನಿಯ ಅಧ್ಯಕ್ಷರಾಗಿ ಕಾರ್ಖಾನೆಯ ಅಭಿವೃದ್ಧಿಗೆ ದುಡಿದಿರುವ ಅವರು ಕೃಷಿ ಮತ್ತು ಕಾವೇರಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಮತ್ತು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ರೈತರ ಹಿತ ಕಾಯುವಲ್ಲಿ ಮುಂಚೂಣಿಯಲ್ಲಿದ್ದರು. ಶ್ರೀಯುತರು ಸ್ವಭಾವತಃ ಶ್ರೀ ಗುರು ದೇವತೆಗಳಲ್ಲಿ ಅಪಾರ ಭಕ್ತಿಯನ್ನುಳ್ಳವರು. ವಿಶೇಷವಾಗಿ ಆದಿಚುಂಚನಗಿರಿ ಕ್ಷೇತ್ರದ ಗುರು ದೇವತೆಗಳಲ್ಲಿ ಅವರಿಗೆ ಅಪಾರ ಭಕ್ತಿ ಗೌರವ. ನಮ್ಮ ಪರಮಪೂಜ್ಯ ಗುರುಗಳಾದ ಜಗದ್ಗುರು ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯ ಸೇವಾ ಕೈಂಕರ್ಯಕ್ಕೆ ಮಾರುಹೋಗಿದ್ದರು.

ಮಾದೇಗೌಡರು ಅರಣ್ಯ ಸಚಿವರಾಗಿದ್ದಾಗ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಅಪಾರ ನವಿಲುಗಳಿರುವುದನ್ನು ತಿಳಿದು ಶ್ರೀ ಕ್ಷೇತ್ರಕ್ಕೆ "ಮಯೂರ ವನ" ಎಂದು ನಾಮಕರಣ ಮಾಡಿಸಿದ್ದು ಎಂದಿಗೂ ಸ್ಮರಣೀಯ. ಶ್ರೀಯುತರು ನಮ್ಮ ಶ್ರೀಮಠವು ಕೈಗೊಳ್ಳುವ ಲೋಕಸೇವಾ ಕೈಂಕರ್ಯಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಶ್ರೀಮಠವು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಹಳೆ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಬಹುಮುಖ ಸೇವೆಯನ್ನು ಪರಿಗಣಿಸಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಇವರಿಗೆ 2015ನೇ ಸಾಲಿನ ಪ್ರತಿಷ್ಠಿತ 'ಚುಂಚ' ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ತಮ್ಮ ಅವಿಸ್ಮರಣೀಯ ಸೇವೆಯ ಮೂಲಕ ನಾಡಿನ ಶ್ರೇಯೋಭಿವೃದ್ಧಿಗಾಗಿ ಪರಿಶ್ರಮಿಸುತ್ತಿದ್ದ ಮಾದೇಗೌಡರ ನಿಧನದಿಂದ ನಾಡಿಗೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿ ವೃಂದಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಆಶಿಸುತ್ತೇವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ತಿಳಿಸಿದ್ದಾರೆ.

ABOUT THE AUTHOR

...view details