ಬೆಂಗಳೂರು: ಕೊರೊನಾ ವೈರಸ್ ರಣಕೇಕೆ ಹಾಕುತ್ತಿರುವ ಈ ಸಂದರ್ಭದಲ್ಲಿ ತಡರಾತ್ರಿ ಮನೆ ಮುಂಭಾಗದ ರಸ್ತೆಯಲ್ಲೇ ಅಡುಗೆ, ಎಣ್ಣೆ ಪಾರ್ಟಿ ಮಾಡಿ ಪುಂಡಾಟ ಮೆರೆದ ನೈಜೀರಿಯಾ ಪ್ರಜೆಗಳನ್ನು ನಗರ ಪೊಲೀಸರು ಬಂಧಿಸಿ ತಕ್ಕ ಪಾಠ ಕಲಿಸಿದ್ದಾರೆ.
ಹೆಣ್ಣೂರಿನ ಚಿಕ್ಕಣ್ಣ ಬಡಾವಣೆಯಲ್ಲಿ ನೈಜೀರಿಯಾ ಪ್ರಜೆಗಳು ವಾರಾಂತ್ಯ ಬಂತೆಂದರೆ ತಮ್ಮ ಮನೆಯ ಮುಂಭಾಗದ ರಸ್ತೆಯನ್ನು ಬಾರ್, ರೆಸ್ಟೋರೆಂಟ್ನಂತೆ ಮಾಡಿಕೊಂಡು ಜೋರಾಗಿ ಕಿರುಚಾಡುತ್ತಾ ಸ್ಥಳೀಯರ ನಿದ್ದೆ ಕೆಡಿಸುತ್ತಿದ್ದಾರೆ. ನಿವಾಸಿಗಳು ಅದನ್ನು ಪ್ರಶ್ನಿಸಿದರೆ, ಅವರು ರಂಪಾಟ ಮಾಡುತ್ತಾರೆ. ಹಲ್ಲೆಗೂ ಮುಂದಾಗುತ್ತಾರೆ.
ಉದ್ದಟತನ ಮೆರೆದ ನೈಜೀರಿಯಾ ಪ್ರಜೆಗಳು ದೈಹಿಕ ಅಂತರ ಮರೆತು 10-20 ಮಂದಿ ನೈಜೀರಿಯನ್ಸ್ ಮಾಂಸದ ಅಡುಗೆ ಮಾಡುತ್ತಾರೆ. ನಡು ರಸ್ತೆಯಲ್ಲೇ ಮದ್ಯ ಸೇವಿಸಿ ಓಡಾಡುವವರಿಗೆ ಕಿರುಕುಳ ಕೊಡುತ್ತಾರೆ. ಇದೇ ಮೊದಲೆಲ್ಲ. ವಾರಾಂತ್ಯ ಬಂತೆಂದರೆ ಸಾಕು ಇದೇ ಗೋಳು ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಈ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಮಾಲೀಕರಿಗೆ ಎಷ್ಟೇ ಬಾರಿ ತಿಳಿಸಿದರೂ ಅವರು ಪ್ರಯೋಜನವಾಗಿರಲಿಲ್ಲ. ಮನೆ ಮುಂದೆ ಎಣ್ಣೆ ಪಾರ್ಟಿ, ಸಿಗರೇಟು, ಬಾಡೂಟ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದರು. ವಿಡಿಯೋ ಆಧರಿಸಿ ಬೆಳ್ಳಂಬೆಳಗ್ಗೆಯೇ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರ ನೇತೃತ್ವದಲ್ಲಿ ಕೆ.ಜಿ ಹಳ್ಳಿ ಪೊಲೀಸರು ದಾಳಿ ನಡೆಸಿ ನೈಜೀರಿಯನ್ಸ್ ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆಗಳ ಎಣ್ಣೆ ಪಾರ್ಟಿ