ಬೆಂಗಳೂರು:ನಮ್ಮಮೆಟ್ರೋ ಕಾಮಗಾರಿಗೆ ನೈಸ್ ಕಂಪನಿ ಭೂಮಿ ನೀಡಲು ತಕರಾರು ಎದ್ದಿರುವ ಸಂಬಂಧ ಮೆಟ್ರೋ ನಿಗಮದ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ ಎಸ್ಯಡಿಯೂರಪ್ಪ ಸಭೆ ನಡೆಸಿದರು.
ಮೈಸೂರು ರಸ್ತೆ, ಕನಕಪುರ ರಸ್ತೆಯ ಕೆಲ ಭಾಗಗಳಲ್ಲಿ ಮೆಟ್ರೋಗೆ ಭೂಮಿ ನೀಡಲು ನೈಸ್ ಕಂಪನಿ ತಕರಾರು ತೆಗೆದಿದೆ. ಈ ಬಗ್ಗೆ ಬಿ ಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದ ಮೆಟ್ರೋ ಅಧಿಕಾರಿಗಳು, ಇದಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಅವರಿಂದಾಗಿ ನಮ್ಮ ಮೆಟ್ರೋ ಕಾಮಗಾರಿ ವಿಳಂಬವಾಗುವುದು ಬೇಡ. ಈ ವಿವಾದ ಸಂಬಂಧ ಹಣವನ್ನು ನ್ಯಾಯಾಲಯಕ್ಕೆ ಡೆಪಾಸಿಟ್ ಮಾಡಿ ಆದಷ್ಟು ಬೇಗ ಕೆಲಸ ಮುಗಿಸಿ ಎಂದು ಮೆಟ್ರೋ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದರು.
ಹೊಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ಮೆಟ್ರೋಗೆ ನಾಲ್ಕು ಎಕರೆ ಜಾಗ ಬೇಕಿದೆ. ಮೂಲ ಮಾಲೀಕರಿಂದ ಕೆಲ ಜಾಗ ನೈಸ್ ಕಂಪನಿಗೆ ಹೋಗಿದೆ. ಈಗ ಆ ಕಂಪನಿ ಕಡೆಯಿಂದ ಮೆಟ್ರೋಗೆ ಭೂಮಿ ಬರಬೇಕಿದೆ. ಕೆಲವು ಕಡೆ ಸರ್ಕಾರಿ ಜಾಗ ಲೀಸ್ಗೆ ಕೊಡಲಾಗಿದೆ. ಹಾಗಾಗಿ ಸ್ವಲ್ಪ ವಿಳಂಬ ಆಗಿದೆ. ಖೇಣಿ ಅವರು ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆದಿಲ್ಲ. ತುಮಕೂರು ರಸ್ತೆ ಬಳಿ ನೈಸ್ ಕಂಪನಿಯವರು ಜಾಗ ಕೊಡಬೇಕು ಎಂದು ಸಿಎಂ ಬಿಎಸ್ವೈಗೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮಾಹಿತಿ ನೀಡಿದರು.
ವಿವರವಾದ ಮಾಹಿತಿ ಪಡೆದುಕೊಂಡ ಸಿಎಂ, ನೈಸ್ಗೆ ಕೊಡಬೇಕಾಗಿರೋ ಹಣವನ್ನು ಕೋರ್ಟ್ನಲ್ಲಿ ಪಾವತಿಸಿ ಕೆಲಸ ಆರಂಭಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಇದ್ದರು.