ಬೆಂಗಳೂರು/ನವದೆಹಲಿ: ಬೆಂಗಳೂರಿನ ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯ ತಡೆಯಲು ವಿಫಲವಾದ ಕಾರಣ ಕರ್ನಾಟಕ ಸರ್ಕಾರ ಹಾಗೂ ಬೊಮ್ಮಸಂದ್ರ ಪುರಸಭೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಒಟ್ಟು 15 ಲಕ್ಷ ರೂ.ದಂಡ ವಿಧಿಸಿದೆ.
ಕಿತ್ತಗಾನಹಳ್ಳಿ ಕೆರೆ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ದಂಡ ಹಾಕಿದ ಕೋರ್ಟ್ - ಕಿತ್ತಗಾನಹಳ್ಳಿ ಕೆರೆ
ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯ ತಡೆಯಲು ವಿಫಲವಾದ ಕಾರಣ ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ಹಾಗೂ ಬೊಮ್ಮಸಂದ್ರ ಪುರಸಭೆಗೆ 5 ಲಕ್ಷ ರೂ. ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ನೀಡಿದೆ.
ನಗರದ ಬೊಮ್ಮಸಂದ್ರ ವ್ಯಾಪ್ತಿಯ ಕಿತ್ತಗಾನಹಳ್ಳಿ ಕೆರೆಗೆ ಕೆಐಎಡಿಬಿ ಕೈಗಾರಿಕಾ ಪ್ರದೇಶದಿಂದ ಬರುವ ಸಂಸ್ಕರಿಸದ ಒಳಚರಂಡಿ ನೀರು ಹರಿಯುವುದನ್ನು, ಮಾಲಿನ್ಯಕಾರಕ ವಸ್ತುಗಳು ಸೇರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿ ಸಂಜಯ್ ರಾವ್ ಹಾಗೂ ಇತರರು ಎನ್ಜಿಟಿಗೆ ಅರ್ಜಿ ಸಲ್ಲಿಸಿದ್ದರು. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು ಅರ್ಜಿಯ ವಿಚಾರಣೆ ನಡೆಸಿದೆ.
ಸರ್ಕಾರ ಹಾಗೂ ಪುರಸಭೆಯ ನಿರ್ಲಕ್ಷ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ಹಾಗೂ ಬೊಮ್ಮಸಂದ್ರ ಪುರಸಭೆಗೆ 5 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶ ನೀಡಿದೆ. ಅಲ್ಲದೇ ನಿಯಮ ಪಾಲನೆ ಮಾಡಿ, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.