ಬೆಂಗಳೂರು:ಶಿವಾಜಿನಗರದಿಂದ ಪೇಪರ್ ಬಂಡಲ್ ತುಂಬಿಕೊಂಡು ಡೆಲಿವರಿ ಮಾಡಲು ಹೋಗುತ್ತಿದ್ದ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರನ್ನು ಬೈಕ್‌ನಲ್ಲಿ ಬಂದ ದರೋಡೆಕೋರರು ಹಲ್ಲೆ ಮಾಡಿದ್ದಾರೆ. ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿ 2 ಸಾವಿರ ರೂ. ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಅಶೋಕ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ ಲೇಔಟ್‍ನ ಆಟೋ ಚಾಲಕ ತಿಮ್ಮಪ್ಪ, ಮುನೇಶ್ವರ ನಗರದ ಅಶ್ವಿನ್‍ಕುಮಾರ್ ಶರ್ಮಾ ಎಂಬುವರು ಹಣ ಹಾಗೂ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ರಿಕಾ ವಿತರಕ ತಿಮ್ಮಪ್ಪ ಬೆಳಗಿನ ಜಾವ ಶಿವಾಜಿನಗರದಿಂದ ದಿನಪತ್ರಿಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಹೊಸೂರು ರಸ್ತೆಯಿಂದ ಸರ್ಜಾಪುರ ಮಾರ್ಗದಲ್ಲಿರುವ ನ್ಯೂಸ್ ಏಜೆನ್ಸಿಗಳಿಗೆ ಡೆಲಿವರಿ ಮಾಡುತ್ತಿದ್ದರು.
ಇದೇ ರೀತಿ ಸೋಮವಾರ ಶಿವಾಜಿನಗರದಿಂದ ಪತ್ರಿಕೆಗಳನ್ನು ತುಂಬಿಕೊಂಡು ಹೋಗುವಾಗ ಬೆಳಗಿನ ಜಾವ 4.15ರ ಸಮಯದಲ್ಲಿ ಬ್ರಿಗೇಡ್ ರಸ್ತೆಯ ಮಾಡೆಲ್ ಮೆಡಿಕಲ್ ಮುಂಭಾಗದ ರಸ್ತೆಯಲ್ಲಿ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿದ್ದರು. ಬಳಿಕ ಮೊಬೈಲ್ ಕಿತ್ತುಕೊಳ್ಳಲು ಮುಂದಾದರು. ಆದರೆ, ಅದಕ್ಕೆ ಅವಕಾಶ ಕೊಡದಿದ್ದಾಗ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಜೇಬಿನಲ್ಲಿದ್ದ 2 ಸಾವಿರ ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ.
ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಶ್ವಿನ್‍ಕುಮಾರ್ ಶರ್ಮಾರನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎಂದು ಪತ್ರಿಕಾ ವಿತರಕರ ತಂಡ ದೂರಿನಲ್ಲಿ ಉಲ್ಲೇಖಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.