ಬೆಂಗಳೂರು:ರಾಜ್ಯದಲ್ಲಿ ಪಕ್ಷದ ಸ್ಥಿತಿ ಮತ್ತಷ್ಟು ಉತ್ತಮಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ವಾರದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಹೊಸ ಟಾಸ್ಕ್ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಯಾವಾಗ ಚುನಾವಣೆಗೆ ಹೋಗಬೇಕು ಎನ್ನುವ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.
ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ಭಾಗದಲ್ಲಿ ಪಕ್ಷ ಇನ್ನಷ್ಟು ಸಂಘಟನೆಯಾಗಬೇಕು. ಅದಕ್ಕೆ ಎಲ್ಲರೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ರಾಜ್ಯದ ಸಚಿವರು, ವಿಭಾಗ ಉಸ್ತುವಾರಿಗಳು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಎಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲವೋ ಅಲ್ಲಿ ಶಕ್ತಿವರ್ಧನೆಗೆ ಏನು ಮಾಡಬೇಕು ಅಂತಾ ರೂಟ್ ಮ್ಯಾಪ್ ಮಾಡಿ ಎಂದು ಶಾ ಸಲಹೆ ನೀಡಿದ್ದಾರೆ.
ಸದ್ಯ ರಾಜ್ಯದಲ್ಲಿ ಈಗ ಅವಧಿಪೂರ್ವ ಚುನಾವಣೆಯ ಚರ್ಚೆ ನಡೆಯುತ್ತಿದೆ. ಚುನಾವಣೆ ಕುರಿತಾದ ವಿಚಾರವನ್ನು ಒಂದು ವಾರದ ಬಳಿಕ ತಿಳಿಸುತ್ತೇನೆ. ಚುನಾವಣೆಗೆ ಹೋದರೆ ರಾಜ್ಯ ಘಟಕದ ಸಾಮರ್ಥ್ಯ ಗೊತ್ತಾಗಿ ಬಿಡುತ್ತದೆ. ಇದರ ಬಗ್ಗೆ ಒಂದು ವಾರದ ಬಳಿಕ ಕರೆ ಮಾಡಿ ವಿವರ ನೀಡುತ್ತೇನೆ ಎಂದು ರಾಜ್ಯ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ಕೋರ್ ಕಮಿಟಿ ಸಭೆ ಮುಕ್ತಾಯದ ಬಳಿಕ ಕೆಲವು ನಿಮಿಷಗಳ ಕಾಲ ಪ್ರತ್ಯೇಕವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದರು. ಕೋರ್ ಕಮಿಟಿ ಸಭೆ ಮುಗಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಗಮಿಸಿದರೆ, ಉಳಿದ ನಾಯಕರು ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಭೋಜನಕೂಟದಲ್ಲಿ ಭಾಗಿಯಾದರು. ಈ ವೇಳೆ ಸಿಎಂ, ಕಟೀಲ್ ಜತೆ ಅಮಿತ್ ಶಾ ಪ್ರತ್ಯೇಕ ಮಾತುಕತೆ ನಡೆಸಿದ್ದು, ನಿಗಮ ಮಂಡಳಿ ವಿಚಾರಗಳ ಮಾತುಕತೆ ನಡೆದಿದೆ. ಎಲ್ಲದಕ್ಕೂ ಒಂದು ವಾರದ ಸಮಯ ಹೇಳಿದ್ದಾರೆ ಎನ್ನಲಾಗ್ತಿದೆ.
ಒಂದು ದಿನದ ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ(ಶುಕ್ರವಾರ) ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದರು. ನಗರದ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತ್ಮೀಯವಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಚಿವ ಆನಂದ ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!