ಬೆಂಗಳೂರು: ನಗರದ ಆಸ್ತಿ ಮಾಲೀಕರು ತಪ್ಪಾಗಿ ವಲಯ ಘೋಷಿಸಿಕೊಂಡು ಕಡಿಮೆ ತೆರಿಗೆ ಕಟ್ಟುತ್ತಿದ್ದರೆ, ಇನ್ಮುಂದೆ ಎಲ್ಲದಕ್ಕೂ ಫುಲ್ ಸ್ಟಾಪ್ ಬೀಳಲಿದೆ. ಎಲ್ಲ ಆಸ್ತಿಗಳನ್ನು ತೆರಿಗೆ ವಲಯಕ್ಕೆ ತರುವುದರೊಂದಿಗೆ ವಲಯ ಪುನರ್ ಪರಿಶೀಲನೆಗೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 'ನಗರದಲ್ಲಿ ಅನೇಕರಿಂದ ತಪ್ಪಾಗಿ ಆಸ್ತಿ ವಲಯ ಘೋಷಣೆಯಾಗಿದ್ದು, ಪರಿಶೀಲಿಸಿ ವಲಯ ಪುನರ್ ವಿಂಗಡಣೆ ಮಾಡಲು ಸಹಾಯಕ ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ' ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹೇಳಿದ್ದಾರೆ.
'ಎ' ಝೋನ್ ನಿಂದ 'ಎಫ್' ವರೆಗೂ ವಿವಿಧ ತೆರಿಗೆ ವಲಯಗಳಿದ್ದು, ಒಂದೊಂದು ವಲಯಕ್ಕೆ ಒಂದೊಂದು ರೀತಿಯ ತೆರಿಗೆ ದರಪಟ್ಟಿ ಇದೆ. ವಲಯ ತಪ್ಪಾಗಿ ಘೋಷಿಸಿಕೊಂಡಿದ್ದರೆ ಪುನರ್ ವಿಂಗಡಣೆ ಮಾಡಲಾಗುತ್ತದೆ. ತೆರಿಗೆ ಪಾವತಿ ವೇಳೆ ಯಾವ ರಸ್ತೆಯಲ್ಲಿ ಆ ಆಸ್ತಿ ಇದೆ ಎಂಬುದನ್ನು ಪತ್ತೆ ಮಾಡಿ, ಅದಕ್ಕೆ ತಕ್ಕ ತೆರಿಗೆ ಪಾವತಿಯಾಗ್ತಿದೆಯಾ? ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.