ಕರ್ನಾಟಕ

karnataka

ETV Bharat / city

ಮಾನೆ ಪ್ರಮಾಣ ವಚನ ಡ್ರಾಮಾ: ಸ್ಪೀಕರ್‌ಗಾಗಿ ಕಾದು ಸುಸ್ತಾದ ಕಾಂಗ್ರೆಸ್‌ ನಾಯಕರು ಗರಂ - ವಿಧಾನಸೌಧದಲ್ಲಿರುವ ಸ್ಪೀಕರ್‌ ಕಚೇರಿ

ಪ್ರಮಾಣ ವಚನ ಸ್ವೀಕರಿಸಲು ಸ್ಪೀಕರ್‌ ಕಚೇರಿಗೆ ಬಂದಿದ್ದ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಅವರು ಸ್ಪೀಕರ್‌ ಕಾಗೇರಿ ಅವರಿಗಾಗಿ ಗಂಟೆಗಟ್ಟಲೆ ಕಾದು ಕುಳಿತ ಪ್ರಸಂಗ ನಡೆದಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರಿದ್ದರು.

new mla srinivas mane and congress leader waiting for oath in speaker chamber in vidhana soudha
ಮಾನೆ ಪ್ರಮಾಣ ವಚನ ಡ್ರಾಮಾ: ಸ್ಪೀಕರ್ ಕಚೇರಿಯಲ್ಲಿ ಕಾದು ಸುಸ್ತಾದ ಕಾಂಗ್ರೆಸ್‌ ನಾಯಕರು ಫುಲ್‌ ಗರಂ!

By

Published : Nov 11, 2021, 2:52 PM IST

ಬೆಂಗಳೂರು: ಹಾನಗಲ್ ‌ನೂತನ ಶಾಸಕ ಶ್ರೀನಿವಾಸ್ ಮಾನೆ ಇಂದು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲು ಸಾಧ್ಯವಾಗಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ನೂತನ ಶಾಸಕ ಶ್ರೀನಿವಾಸ್ ಮಾನೆ ಸೇರಿದಂತೆ ಕಾಂಗ್ರೆಸ್‌ ನಾಯಕರ ತಂಡ ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ತಾಸುಗಟ್ಟಲೆ ಕಾದು ಕುಳಿತರೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಕಚೇರಿಗೆ ಆಗಮಿಸಲೇ ಇಲ್ಲ.

ಸಮ್ಮೇಳನ‌ ಸಭಾಂಗಣದಲ್ಲಿ ಪ್ರಮಾಣ ವಚನವನ್ನು ತಪ್ಪಿಸಿಕೊಂಡಿದ್ದ ಶ್ರೀನಿವಾಸ್ ಮಾನೆ ಅವರು ಡಿಕೆಶಿ ಜೊತೆಗೂಡಿ ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರಕ್ಕೆ ಬಂದಿದ್ದರು. ಆದರೆ ತಾಸುಗಟ್ಟಲೆ ಕಾದರೂ ಸ್ಪೀಕರ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಕಾಯುವ ಆಟವೇ ಮುಂದುವರಿಯಿತು.

ಮೊದಲು ಶ್ರೀನಿವಾಸ ಮಾನೆಗೆ ಕಾದು ಕುಳಿತ ಸ್ಪೀಕರ್ ಕಾಗೇರಿ ಸಿಡಿಮಿಡಿಗೊಂಡಿದ್ದರು. ಆ ಬಳಿಕ ಸ್ಪೀಕರ್ ಕಚೇರಿಯಲ್ಲಿ ಸ್ಪೀಕರ್‌ಗಾಗಿ ಕಾಯುತ್ತ ಕುಳಿತು ಕೈ ನಾಯಕರು ಕಸಿವಿಸಿ ಅನುಭವಿಸಿದರು. ಇದಾದ ಮೇಲೆ ಸ್ಪೀಕರ್‌ಗೆ ಡಿಕೆಶಿ ಕರೆ ಮಾಡಿ ಐದು ನಿಮಿಷ ಬಂದು ಪ್ರಮಾಣ ವಚನ ಮುಗಿಸಿ ಎಂದು ಮನವಿ ಮಾಡಿದರು. ಈ ವೇಳೆ ಸ್ಪೀಕರ್ ಬೇರೆಯವರಿಗೆ ಸಮಯ ಕೊಟ್ಟಿದ್ದೇನೆ ಎಂದು ಉತ್ತರಿಸಿದರು. ಅದಕ್ಕೆ ನಿಮ್ಮಿಷ್ಟ ನೋಡಿ ಎಂದು ಡಿಕೆಶಿ ಮನವಿ ಮಾಡಿದರು.

ಇದೇ ವೇಳೆ ಸ್ಪೀಕರ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನೆ ಜಗದ ನಿಯಮ ಗೀತೆಯ ಸಾರಾಂಶವನ್ನು ಡಿಕೆಶಿ ಓದಿದರು. ಆದೆದ್ದಲ್ಲಾ ಒಳ್ಳೆಯದಕ್ಕೇ ಆಗಿದೆ, ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ. ಮುಂದೆ ಆಗಲಿರುವುದು ಒಳ್ಳೆಯದೇ ಆಗಲಿದೆ ಎನ್ನುವ ಗೀತೆಯ ಸಾರಾಂಶವನ್ನು ಓದಿ ಶಾಸಕ ಮಾನೆಗೆ ತಿಳಿಸಿದರು. ಸುಮಾರು ಒಂದು ತಾಸು ಕಾಲ ಡಿಕೆಶಿ, ಶ್ರೀನಿವಾಸ್ ಮಾನೆ, ರಿಜ್ವಾನ್ ಅರ್ಷದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಐವಾನ್ ಡಿಸೋಜಾ ಸ್ಪೀಕರ್‌ಗಾಗಿ ಚೇಂಬರ್‌ನಲ್ಲಿ ಕಾದು ಕುಳಿತರು.

ಕೊನೆಗೆ ಸ್ಪೀಕರ್‌ಗೆ ಕರೆ ಮಾಡಿ ಕೇಳುವಂತೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಡಿಕೆಶಿ ಮನವಿ ಮಾಡಿದರು. ಆ ವೇಳೆ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿದ್ದು, ಈಗ ಪ್ರಮಾಣ ವಚನ ಸ್ವೀಕಾರ‌ ಮಾಡಲು ಆಗುವುದಿಲ್ಲ. ಮುಂದೆ ಸೂಕ್ತ ಸಮಯ ನಿಗದಿ ಮಾಡುತ್ತೇನೆ ಎಂದು ಕಾರ್ಯದರ್ಶಿ ವಿಶಾಲಾಕ್ಷಿಗೆ ಹೇಳಿದರು. ಆ ಬಳಿಕ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಕಾಂಗ್ರೆಸ್‌ ನಾಯಕರು ವಾಪಸಾದರು. ಈ ವೇಳೆ ಡಿಕೆಶಿ ತಮ್ಮ ಅಸಮಾಧಾನ ಹೊರ ಹಾಕಿದರು.

ಉಪಸಮರದ ಫಲಿತಾಂಶದ ಪರಿಣಾಮ ಇದು:

ಪ್ರಮಾಣ ವಚನ ಬೋಧಿಸಲು ಸ್ಪೀಕರ್ ಬಾರದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಅಸಮಾಧಾ‌ನ ವ್ಯಕ್ತಪಡಿಸಿದರು. ಉಪಸಮರದ ಫಲಿತಾಂಶದ ಫಲಿತಾಂಶ ಇದು ಎಂದು ಪರೋಕ್ಷವಾಗಿ ಕಿಡಿ ಕಾರಿದರು.

ಹಾನಗಲ್ ಚುನಾವಣೆಯಲ್ಲಿ ಸೋತ ಉರಿ, ಹತಾಶೆಯನ್ನು ಸ್ಪೀಕರ್ ಈ ರೀತಿ ತೋರಿಸುತ್ತಿದ್ದಾರೆ ಎಂದು ಸ್ಪೀಕರ್ ಮೇಲೆ ನೇರ ಆರೋಪ ಮಾಡಿದ ಡಿಕೆಶಿ, ಸ್ಪೀಕರ್ ಪಕ್ಷಾತೀತ ಅಲ್ಲವೇ ಎನ್ನುವ ಪ್ರಶ್ನೆಗೆ ಯಾವ ಪಕ್ಷಾತೀತ? ಎಂದು ಕೇಳಿದರು.

ABOUT THE AUTHOR

...view details