ಬೆಂಗಳೂರು:ವಿದ್ಯಾರ್ಥಿಗಳ ಪರಿಪೂರ್ಣ ವಿಕಸನವನ್ನೇ ಗುರಿಯಾಗಿ ಹೊಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಹಂತದಿಂದಲೇ ಕಲೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ಈ ಮೂಲಕ ಮೂಡಲಪಾಯದಂತಹ ದೇಶೀಯ ಮತ್ತು ಸ್ಥಳೀಯ ಕಲೆಗಳ ಸಂರಕ್ಷಣೆ ಮತ್ತು ಉಜ್ವಲ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದ ಎಡಿಎ ರಂಗಮಂದಿರದಲ್ಲಿ ಸೋಮವಾರ ಮೂಡಲಪಾಯ ಯಕ್ಷಗಾನ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಯಾವುದೇ ವೃತ್ತಿಯಲ್ಲಿ ತೊಡಗಿಕೊಂಡರೂ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಗಳಿರಲೇಬೇಕು. ಇಲ್ಲದೆ ಹೋದರೆ ಬದುಕಿನ ಆನಂದ ಸಿಗುವುದಿಲ್ಲ ಎಂದರು.
ಹಳೇ ಮೈಸೂರಿನ ಭಾಗದಲ್ಲಿ ಮೂಡಲಪಾಯ ಯಕ್ಷಗಾನವು ಕಾರಣಾಂತರಗಳಿಂದ ತುಸು ನೇಪಥ್ಯಕ್ಕೆ ಸರಿದಿದೆ. ಈ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಕಲಾವಿದರಿದ್ದು, ಬದುಕಿನಲ್ಲಿ ಒಮ್ಮೆಯಾದರೂ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗದ ಮೇಲೆ ಅಭಿನಯಿಸಿದವರಿದ್ದಾರೆ. ಇಂತಹ ಶ್ರೀಮಂತ ಕಲಾ ಪ್ರಕಾರವನ್ನು ಕಾಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸಬೇಕಾಗಿದೆ. ಇದಕ್ಕೆ ಆದಿಚುಂಚನಗಿರಿ ಶ್ರೀಗಳು ಪೋಷಕರಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.