ಬೆಂಗಳೂರು: ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಸಮಯಕ್ಕಿಂತಲೂ ವೇಗವಾಗಿ ಚಲಿಸುತ್ತಿರುವ ಆಧುನಿಕ ಯುಗದಲ್ಲಿ ಎಲ್ಲರ ಜೀವನವು ಗಡಿಬಿಡಿಯಿಂದಲೇ ಕೂಡಿದೆ. ಅದರಲ್ಲೂ ವಾಹನ ಚಾಲನೆಯಲ್ಲಿ ಒಂದು ಕೈ ಮೇಲೆ ಎನ್ನುವಂತೆ ಅವಸರ ಹೆಚ್ಚಿದೆ. ಈ ಅವಸರ ಮತ್ತು ನಿರ್ಲಕ್ಷ್ಯವೇ ಇಂದು ಅನೇಕ ಅಪಘಾತಗಳಿಗೆ ಕಾರಣವಾಗಿದೆ.
ವಾಹನ ಚಾಲಕರಲ್ಲಿ ಸಂಚಾರಿ ನಿಯಮವನ್ನು ಜಾಗೃತಿಗೊಳಿಸಲು, ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ದಂಡವನ್ನು ಹಾಕುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಕಡಿಮೆ ಮಾಡಲು ಹೈವೇ ಪಾಟ್ರೋಲ್ ಗಸ್ತು ವಾಹನ ಸಂಚರಿಸುತ್ತವೆ. ಇಷ್ಟಾದರೂ ಅತಿ ವೇಗವಾಗಿ ವಾಹನ ಚಲಾಯಿಸುವುದರಿಂದ ನಿತ್ಯ ಅದೆಷ್ಟೋ ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಆದರೆ, ಮಾನವನ ವೇಗಕ್ಕೆ ಲಗಾಮು ಹಾಕಿದ ಕೊರೊನಾದಿಂದ ಲಾಕ್ಡೌನ್ ಘೋಷಣೆಯಾಯ್ತು. ಇದರಿಂದಾಗಿ ರಸ್ತೆ ಅಪಘಾತಗಳು ಕೊಂಚ ಮಟ್ಟಿಗೆ ಕಡಿಮೆಯಾಗಿವೆ. ಉದಾಹರಣೆಗೆ 2019 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1,542 ಅಪಘಾತ ಪ್ರಕರಣಗಳು ನಡೆದಿವೆ. ಇದರಲ್ಲಿ 328 ಪ್ರಕರಣಗಳು ಮಾರಣಾಂತಿಕ ಪ್ರಕರಣಗಳಾಗಿವೆ. 1,214 ಮಾರಣಾಂತಿಕವಲ್ಲದ ಪ್ರಕರಣಗಳು ದಾಖಲಾಗಿವೆ. 328 ಮಾರಣಾಂತಿಕ ಪ್ರಕರಣದಲ್ಲಿ 365 ಜನ ಸಾವನ್ನಪ್ಪಿದ್ದಾರೆ. 1,214 ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ 2,114 ಜನ ಗಾಯಾಳುಗಳಾಗಿದ್ದಾರೆ. ಆದರೆ, 2020 ರ ಆಗಸ್ಟ್ ಅಂತ್ಯಕ್ಕೆ 806 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 163 ಮಾರಣಾಂತಿಕ ಅಪಘಾತ ಪ್ರಕರಣಗಳಾಗಿವೆ. ಅದರಲ್ಲಿ 177 ಜನ ಸಾವನ್ನಪ್ಪಿದ್ದಾರೆ. ಉಳಿದಂತೆ 643 ಮಾರಣಾಂತಿಕ ಅಪಘಾತಗಳು ನಡೆದಿದ್ದು, ಇದರಲ್ಲಿ1,473 ಜನ ಗಾಯಗೊಂಡಿದ್ದಾರೆ.