ಕರ್ನಾಟಕ

karnataka

ಆಕ್ಸಿಜನ್ ಬೇಡಿಕೆ ಪೂರೈಕೆ ವಿವರ ಕೊಡಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

By

Published : May 20, 2021, 7:29 PM IST

ರಾಜ್ಯದಲ್ಲಿ ಮೇ 17ರಿಂದ 24ರವರೆಗಿನ ಪ್ರತಿದಿನದ ಆಕ್ಸಿಜನ್ ಬೇಡಿಕೆ, ಕೇಂದ್ರದ ಹಂಚಿಕೆ, ಪಡೆದುಕೊಂಡ ಪ್ರಮಾಣ ಹಾಗೂ ಸುಪ್ರೀಂಕೋರ್ಟ್ ಜಿಲ್ಲಾವಾರು ಬಫರ್ ಆಕ್ಸಿಜನ್ ದಾಸ್ತಾನು ವ್ಯವಸ್ಥೆ ಮಾಡಿರುವ ಬಗ್ಗೆ ವಿವರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿದೆ.

 Need Oxygen Demand Supply Details: High Court direction to Govt
Need Oxygen Demand Supply Details: High Court direction to Govt

ಬೆಂಗಳೂರು: ರಾಜ್ಯದಲ್ಲಿ ಮೇ 17ರಿಂದ 24ರವರೆಗಿನ ನಿತ್ಯದ ಆಕ್ಸಿಜನ್ ಬೇಡಿಕೆ ಎಷ್ಟು, ಕೇಂದ್ರದಿಂದ ಹಂಚಿಕೆಯಾದ ಹಾಗೂ ಪಡೆದುಕೊಂಡ ಪ್ರಮಾಣ ಎಷ್ಟು ಮತ್ತು ಜಿಲ್ಲಾವಾರು ಬಫರ್ ದಾಸ್ತಾನು ಎಷ್ಟಿದೆ ಎಂಬುದರ ಬಗ್ಗೆ ವಿವರ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರ ಸಲ್ಲಿಸಿದ ಲಿಖಿತ ಹೇಳಿಕೆ ಪರಿಶೀಲಿಸಿದ ಪೀಠ, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇನ್ನೂ ಹಾಗೆಯೇ ಇದೆ. ಬೇಕಾಗುವಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿಲ್ಲ. ಗುರುವಾರದ ಬೇಡಿಕೆಯಂತೆ 1,396 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇದೆ. ಆದರೆ, ಸರ್ಕಾರ 900 ಮೆಟ್ರಿಕ್ ಟನ್ ಮಾತ್ರ ತರಿಸಿಕೊಂಡಿದೆ. ಮೇ 17 ಮತ್ತು 18ರ ವಿವರ ಗಮನಿಸಿದರೆ ರಾಜ್ಯಕ್ಕೆ ಹಂಚಿಕೆಯಾದ ಪೂರ್ಣ ಪ್ರಮಾಣದ ಕೋಟಾವನ್ನು ಸರ್ಕಾರ ಪಡೆದುಕೊಳ್ಳುತ್ತಿಲ್ಲ ಎಂದಿತು.

ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮಾಹಿತಿ ನೀಡಿ, ರಾಜ್ಯದಲ್ಲೇ ಉತ್ಪಾದನೆಯಾಗುವ ನಮ್ಮ ಪಾಲಿನ ಆಕ್ಸಿಜನ್ ಎತ್ತುವಳಿ ಮಾಡಿಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಬೇರೆ ಕಡೆ ಹಂಚಿಕೆಯಾದ ರಾಜ್ಯದ ಪಾಲು ತರಿಸಿಕೊಳ್ಳಲು ಲಾಜಿಸ್ಟಿಕ್ ಸಮಸ್ಯೆ ಎದುರಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯದಲ್ಲಿ ಮೇ 17ರಿಂದ 24ರವರೆಗಿನ ಪ್ರತಿದಿನದ ಆಕ್ಸಿಜನ್ ಬೇಡಿಕೆ, ಕೇಂದ್ರದ ಹಂಚಿಕೆ, ಪಡೆದುಕೊಂಡ ಪ್ರಮಾಣ ಹಾಗೂ ಸುಪ್ರೀಂಕೋರ್ಟ್ ಜಿಲ್ಲಾವಾಸರು ಬಫರ್ ಆಕ್ಸಿಜನ್ ದಾಸ್ತಾನು ವ್ಯವಸ್ಥೆ ಮಾಡಿರುವ ಬಗ್ಗೆ ವಿವರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.

ABOUT THE AUTHOR

...view details