ಬೆಂಗಳೂರು:ದೇಶದ ಐದು ರಾಷ್ಟ್ರೀಯ ಪಕ್ಷಗಳಲ್ಲಿ ಎನ್‌ಸಿಪಿಯೂ ಒಂದಾಗಿದ್ದು, ಉತ್ತರದ ಕೆಲವು ರಾಜ್ಯಗಳಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆ. ಇದೀಗ ಕರ್ನಾಟಕಕ್ಕೂ ನಮ್ಮ ಪಕ್ಷ ಪದಾರ್ಪಣೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷವು ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದೆ. ಇದರಿಂದ ಯಾವುದೇ ಪಕ್ಷದ ಜಾತ್ಯಾತೀತ ಅಭ್ಯರ್ಥಿಗಳಿಗೆ ತೊಂದರೆ ಆಗುವುದಿಲ್ಲ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಹಾಗೂ ಎನ್‌ಸಿಪಿ ಪಕ್ಷದ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ತಿಳಿಸಿದರು.
ನಗರದ ಲೀಲಾ ಪ್ಯಾಲೇಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಪಕ್ಷದ ಸಂಘಟನೆಯು ನಮ್ಮ ಮುಖ್ಯ ಉದ್ದೇಶವಾಗಿದ್ದು, ರಾಜ್ಯದಲ್ಲಿ ಈಗ ಪಕ್ಷದ ಕಚೇರಿ ಆರಂಭಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸೀಮಿತ ಕ್ಷೇತ್ರಗಳಲ್ಲಿ ಎನ್‌ಸಿಪಿ ಸ್ಪರ್ಧೆ ಮಾಡಲಿದೆ. ರಾಜ್ಯದ ವಸ್ತುಸ್ಥಿತಿ ಮತ್ತು ಸಮಸ್ಯೆಗಳನ್ನು ತಿಳಿಯಲು ಬೆಂಗಳೂರಿನಿಂದ ಬೆಳಗಾವಿವರೆಗೆ ಒಟ್ಟು 511 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.