ಬೆಂಗಳೂರು: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ. ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿರುವ ಶರದ್ ಪವಾರ್ ನೇತೃತ್ವದ ಎನ್ಸಿಪಿ ಮಹಾರಾಷ್ಟ್ರದಲ್ಲಿ 53 ಸ್ಥಾನಗಳನ್ನು ಗಳಿಸುವ ಮೂಲಕ ಸದ್ಯ ಶಿವಸೇನೆ, ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಿ ಅಧಿಕಾರ ನಡೆಸುತ್ತಿದೆ.
ಕರ್ನಾಟಕ ಸಹ ಮಹಾರಾಷ್ಟ್ರದ ಪಕ್ಕದ ರಾಜ್ಯ ಆಗಿದ್ದು ಇಲ್ಲಿಯೂ ಸಾಕಷ್ಟು ಮರಾಠಿಗರು ನೆಲೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿಗರು ಇರುವ ಪ್ರದೇಶವನ್ನು ಗುರುತಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಶರದ್ ಪವಾರ್ ನಿರ್ಧರಿಸಿದ್ದಾರೆ. ಎನ್ಸಿಪಿಯನ್ನು ರಾಜ್ಯಕ್ಕೆ ಪರಿಚಯಿಸುವ ಭಾಗವಾಗಿ ಚುನಾವಣೆಗೆ ಒಂದು ವರ್ಷ ಮುನ್ನವೇ ಸಿದ್ಧತೆ ಆರಂಭಿಸಿರುವ ಶರದ್ ಪವಾರ್, ಖುದ್ದು ತಮ್ಮದೇ ನೇತೃತ್ವದಲ್ಲಿ ಇಂದು ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ದೇವನಹಳ್ಳಿಯಿಂದ ಬೃಹತ್ ಮೆರವಣಿಗೆ ಸಹ ಹಮ್ಮಿಕೊಂಡಿದ್ದು, ಬಾಣಸವಾಡಿಯಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತ ಬಂದಿದ್ದು, ಅಕ್ಕಪಕ್ಕದ ರಾಜ್ಯಗಳ ಕೆಲ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ತಮ್ಮ ರಾಜಕೀಯ ಪ್ರವೇಶದ ಪ್ರಯತ್ನ ನಡೆಸುವುದು ಸಹಜ.
ಈಗಾಗಲೇ ಆಮ್ ಆದ್ಮಿ ಪಕ್ಷ, ಸಿಪಿಐಎಂ, ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಕರ್ನಾಟಕದ ರಾಜಕೀಯ ಕಣಕ್ಕಿಳಿದು ಅಲ್ಪಸ್ವಲ್ಪ ಯಶಸ್ಸು ಸಂಪಾದಿಸಿವೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ ಕರ್ನಾಟಕದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದು ಇದೇ ಮೊದಲಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲೂ ಸಹ ರಾಜ್ಯದ 14 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.