ಬೆಂಗಳೂರು: ತೈಲ ಬೆಲೆ ಇಳಿಕೆಗೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಲಾರಿ ಮುಷ್ಕರ ನಡೆಸಲಾಗುತ್ತಿದೆ.
ಅಗತ್ತ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದಂತೆ ಯಾವುದೇ ಲಾರಿ ಸಂಚಾರವಿಲ್ಲ, ಸುಮಾರು ಆರು ಲಕ್ಷ ಲಾರಿಗಳು ಇಂದು ತಟಸ್ಥವಾಗಿವೆ. ತುಮಕೂರಿನ ನೈಸ್ ರಸ್ತೆ ಬಳಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
ಸದ್ಯ ಒಂದು ದಿನಕ್ಕೆ ಮಾತ್ರ ಮುಷ್ಕರ ಮಾಡಲಾಗುತ್ತಿದ್ದು, ಸರ್ಕಾರ ತೈಲ ಬೆಲೆ ಇಳಿಕೆ ಮಾಡದಿದ್ದರೆ ಮಾರ್ಚ್ 5 ರಂದು ಸಭೆ ನಡೆಸಿ 15 ರಂದು ಅನಿರ್ಧಿಷ್ಟವಾಧಿ ಮುಷ್ಕರಕ್ಕೆ ಕರೆ ನೀಡಲಾಗುತ್ತದೆ ಎಂದು ಲಾರಿ ಮಾಲೀಕರ ಸಂಘ ಎಚ್ಚರಿಸಿದೆ. ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದೆ.
ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿವೆ. ಇ- ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್ 6 ವಾಹನಗಳ ಬಿಡಿಭಾಗಗಳ ದರ ಹೆಚ್ಚಳ, ತೈಲ ಬೆಲೆ ಏರಿಕೆಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಬೇರೆ ರಾಜ್ಯದಲ್ಲಿ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಇಳಿಸಲಾಗಿದೆ. ತೈಲ ಬೆಲೆ ಏರಿಕೆಯಿಂದ ಸಮಸ್ಯೆ ಉಂಟಾಗಿದ್ದು, ಹೀಗಾಗಿ ಇಂದು ಲಾರಿ ಮಾಲೀಕರು ಪ್ರತಿಭಟನೆ ನೆಡೆಸುತ್ತಿದ್ದಾರೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಈಟಿವಿ ಭಾರತಕ್ಕೆ ತಿಳಿಸಿದರು.
ಪ್ರತಿ ಲೀಟರ್ ಡಿಸೇಲ್ಗೆ 3 ರೂ. ಸೆಸ್ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದೇವೆ. ನೈಸ್ ರಸ್ತೆಯಲ್ಲಿ ಫಾಸ್ಟ್ ಟ್ಯಾಗ್ ಮಾಡಿಲ್ಲ, ನೈಸ್ ರಸ್ತೆಯಲ್ಲಿ ಒಟ್ಟು 11 ಟೋಲ್ಗಳಿವೆ. ಕೂಡಲೇ ರಾಜ್ಯ ನೈಸ್ ರಸ್ತೆಯ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಮನವಿ ಮಾಡಿದ್ದೇವೆ. ಜೊತೆಗೆ ಕೋವಿಡ್ ಸಮಯದಲ್ಲಿ ಲಾರಿ ಮಾಲೀಕರಿಗೆ ಕಷ್ಟವಾಗುತ್ತಿದ್ದು, ಕೂಡಲೇ ಇನ್ಶೂರೆನ್ಸ್ ಕಡಿಮೆ ಮಾಡಬೇಕು, ಹಾಗೂ ಮರಳು ನೀತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಕೂಡಲೇ ಸರ್ಕಾರ ಲಾರಿ ಮಾಲೀಕರನ್ನು ಮಾತುಕತೆಗೆ ಕರೆಯಬೇಕು. ಸರ್ಕಾರ ಮಾತುಕತೆ ನಡೆಸಲಿಲ್ಲ ಅಂದ್ರೆ ಮಾರ್ಚ್ 15 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನೆಡೆಸುತ್ತೇವೆ. ಲಾರಿಗಳ ಓಡಾಟ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.