ಕರ್ನಾಟಕ

karnataka

By

Published : Feb 10, 2021, 7:16 PM IST

ETV Bharat / city

ಐಐಎಚ್​ಆರ್​ ತಂತ್ರಜ್ಞಾನಗಳ ವಾಣಿಜ್ಯೀಕರಣ ಒಡಂಬಡಿಕೆಗೆ ಸಹಿ.. ಪತ್ರ ಹಸ್ತಾಂತರ

ತೋಟಗಾರಿಕೆ ಉತ್ಪಾದನೆಯಲ್ಲಿ ಕರ್ನಾಟಕ 8 ನೇ ಸ್ಥಾನದಲ್ಲಿದ್ದು, ವಿಸ್ತರಣೆಯಲ್ಲಿ ಒಂದನೇ ಸ್ಥಾನದಲ್ಲಿದೆ. ಹಾಗಾಗಿ ಉತ್ಪಾದನೆಯಲ್ಲಿ ಎರಡನೇ ಅಥವಾ ಮೂರನೇ ಸ್ಥಾನಕ್ಕೆ ತರಲು ಎಲ್ಲಾ ರೀತಿಯ ಒತ್ತು ನೀಡಲಾಗುವುದು ಎಂದು ಸಚಿವ ಆರ್. ಶಂಕರ್ ತಿಳಿಸಿದರು.

ಆರ್ .ಶಂಕರ್
ಆರ್ .ಶಂಕರ್

ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್​ಆರ್) ತಾನು ಅಭಿವೃದ್ಧಿಪಡಿಸಿರುವ ತೋಟಗಾರಿಕೆ ತಂತ್ರಜ್ಞಾನಗಳನ್ನು ವಾಣಿಜ್ಯೀಕರಣ ಮಾಡಲು, ಪರವಾನಗಿ ಪಡೆದ ನಾಲ್ಕು ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಇಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.

ಹೆಸರಘಟ್ಟದಲ್ಲಿ ಐಐಹೆಚ್​ಆರ್ ಎರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳ

ತೋಟಗಾರಿಕೆ ಸಚಿವ ಆರ್. ಶಂಕರ್ ಒಡಂಬಡಿಕೆ ಪತ್ರವನ್ನು ಕಂಪನಿಯ ಮುಖ್ಯಸ್ಥರಿಗೆ ಇಂದು ಹಸ್ತಾಂತರ ಮಾಡಿದರು. ಹೆಸರಘಟ್ಟದಲ್ಲಿ ಐಐಹೆಚ್​ಆರ್ ಏರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಪಾಲ್ಗೊಂಡ ಸಚಿವರು, ತೋಟಗಾರಿಕೆ ಉತ್ಪಾದನೆಯಲ್ಲಿ ಕರ್ನಾಟಕ 8 ನೇ ಸ್ಥಾನದಲ್ಲಿದ್ದು, ವಿಸ್ತರಣೆಯಲ್ಲಿ ಒಂದನೇ ಸ್ಥಾನದಲ್ಲಿದೆ. ಉತ್ಪಾದನೆಯಲ್ಲಿ ಎರಡನೇ ಅಥವಾ ಮೂರನೇ ಸ್ಥಾನಕ್ಕೆ ಬರಲು ಎಲ್ಲಾ ರೀತಿಯ ಒತ್ತು ನೀಡಲಾಗುವುದು ಎಂದರು.

ತೋಟಗಾರಿಕೆ ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಸಿಮೀತವಾಗಿದ್ದು, ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಆಗಬೇಕಾಗಿದೆ. ಐಐಹೆಚ್​ಆರ್ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಪ್ರಸಕ್ತ ಬಜೆಟ್​ನಲ್ಲಿ ಅನುದಾನ ಮೀಸಲಿಡುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಆರ್. ಶಂಕರ್ ತಿಳಿಸಿದರು.

ತೋಟಗಾರಿಕಾ ಮೇಳದಲ್ಲಿ ಐಐಹೆಚ್​ಆರ್ ಅಭಿವೃದ್ಧಿ ಪಡಿಸಿದ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರೈತರು ತೋಟಗಾರಿಕಾ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಕೃಷಿಯಲ್ಲಿ ಹೆಚ್ಚು ಉತ್ಪಾದನೆ ಮಾಡಲಿ ಎಂದರು.

ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಮತ್ತು ತಳಿಗಳನ್ನು ಕಳೆದ ಹತ್ತು ವರ್ಷಗಳಿಂದೀಚೆಗೆ ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ತಂತ್ರಜ್ಞಾನ ನಿರ್ವಾಹಕ ಘಟಕದಲ್ಲಿ ನೂರಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಲಾಗಿದೆ. ಐಐಹೆಚ್​ಆರ್ ಇಂದು ರೈನ್ ಬೋ ಆಗ್ರಿ ವೆಟ್ ಸಿರಿ ಟೆಕ್ನಾಲಾಜಿಸ್ ಪ್ರೈವೇಟ್ ಲಿಮಿಟೆಡ್, ಪಿ.ಜೆ. ಮಾರ್ಗೋ ಪ್ರೈವೇಟ್ ಲಿಮಿಟೆಡ್, ಗ್ರೀನ್ ಟೆಕ್ ಫರ್ಟಿಲೈಸರ್ ಕಾರ್ಪೋರೇಷನ್, ಮತ್ತು ಲಾ ಫರ್ಮ್ ಡಿ ಪೀಟರ್ ಎಲ್ ಎಲ್ ಪಿ ಸಂಸ್ಥೆಗಳ ಜತೆ ಒಡಂಬಡಿಕೆಗೆ ಸಹಿ ಮಾಡಿದೆ.

ಇನ್ನು ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಫೌಸಿಯಾ ತರ್ನಮ್, ಬಾಗಲಕೋಟೆ ತೋಟಗಾರಿಕೆ ವಿ.ವಿ. ಉಪಕುಲಪತಿ ಡಾ. ಇಂದ್ರೇಶ್, ಐಐಹೆಚ್​ಆರ್ ನಿರ್ದೇಶಕ ಡಾ.ಎಂ.ಆರ್. ದಿನೇಶ್, ರಾಷ್ಟ್ರೀಯ ತೋಟಗಾರಿಕೆ ಮೇಳದ ಕಾರ್ಯದರ್ಶಿ ಮತ್ತು ಪ್ರಧಾನ ವಿಜ್ಞಾನಿ ಎಂ.ವಿ. ಧನಂಜಯ್ ಹಾಜರಿದ್ದರು.

ABOUT THE AUTHOR

...view details