ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ನರೇಗಾ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಶಾಸಕರಿಗೆ ಹೇಳಿದ್ದಾರೆಂಬ ಕಾರಣಕ್ಕೆ ಒಂದೇ ಊರಿನ ಎರಡು ಕುಟುಂಬಗಳ ನಡುವೆ ಸಂಘರ್ಷ ನಡೆದಿದೆ. ಈ ಗಲಾಟೆಯಲ್ಲಿ ಗೌರಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗೌರಮ್ಮನ ಮಗ ನಾಗರಾಜ್ ಗಾಯಗೊಂಡಿದ್ದು, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಧಾಕರ್ ಕುಟುಂಬದವರು ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಡಿಸಿದ್ದಾರೆ. ಆದರೆ ನರೇಗಾ ಯೋಜನೆಗೆ ಮಾನವ ಸಂಪನ್ಮೂಲ ಬಳಸದೆ ಯಂತ್ರಗಳ ಮೂಲಕ ಮಾಡಿಸಿದ್ದಾರೆ ಎಂದು ಮೃತ ಮಹಿಳೆ ಗೌರಮ್ಮ ಅವರ ಮಗ ನಾಗರಾಜ್ ಶಾಸಕರಿಗೆ ದೂರು ನೀಡಿದ್ದಾರೆಂಬ ಗುಮಾನಿ ಸುಧಾಕರ್ ಕುಟುಂಬಕ್ಕೆ ಇತ್ತು. ಈ ಕಾರಣಕ್ಕೆ ಶುಕ್ರವಾರ ರಾತ್ರಿ 7 ಗಂಟೆ ಸಮಯದಲ್ಲಿ ಸುಧಾಕರ್, ಹನುಮಂತರಾಯಪ್ಪ, ಮಾರುತಿ ಮತ್ತು ಚಿನ್ನಕ್ಕ ಎಂಬುವವರು ಗೌರಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.