ಬೆಂಗಳೂರು:ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ದಂಧೆಕೋರರನ್ನು ರಾಷ್ಟ್ರೀಯ ಮಾದಕವಸ್ತು ನಿಗ್ರಹದಳ (NCB) ಅಧಿಕಾರಿಗಳು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬೆಂಗಳೂರು, ತಿರುವನಂತಪುರ ಹಾಗೂ ತಮಿಳುನಾಡಿನ ವೆಲ್ಲೂರಿನಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರಿನಿಂದ ತಿರುವನಂತಪುರಕ್ಕೆ ಆಂಫೆಟಮೈನ್ ಹೆಸರಿನ ಡ್ರಗ್ಸ್ ಅನ್ನು ಕೊರಿಯರ್ ಮೂಲಕ ಸಾಗಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗದ ಎನ್‌ಸಿಬಿ ಅಧಿಕಾರಿಗಳು ತಿರುವಂತಪುರ ಉಪ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ದಾಳಿ ನಡೆಸಿದ ತಿರುವನಂತಪುರ ಅಧಿಕಾರಿಗಳು ಚ್ಯುವಿಂಗ್ಗಮ್, ಹಾಗೂ ಚಾಕೊಲೆಟ್ ಪೇಪರ್ಗಳಲ್ಲಿ ಮಾದಕವಸ್ತು ಇಟ್ಟು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಅಲ್ಲದೇ, 244 ಗ್ರಾಂ ಆಂಫೆಟಮೈನ್, 25 ಎಲ್ಎಸ್ಡಿ, ಸ್ಟಾಪ್ಗಳು, 2 ಗ್ರಾಂ ಮೆಥಾಕ್ವಾಲೋನ್, 44 ಗ್ರಾಂ ಮೇಂಥಾ ಫೆಟಮೈನ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಆಂಧ್ರಪ್ರದೇಶದಿಂದ ತಮಿಳುನಾಡು ಕಡೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ಚೆನ್ನೈ ವಿಭಾಗದ ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿ 212 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಈರೋಡ್ನಲ್ಲಿರುವ ಮನೆಯೊಂದರಲ್ಲಿ ತೆಂಗಿನ ಸಸಿಯ ಮಣ್ಣಿನಲ್ಲಿ ಸಣ್ಣಸಣ್ಣ ಪ್ಯಾಕೇಟ್ಗಳಲ್ಲಿ ಗಾಂಜಾವನ್ನು ಸಂಗ್ರಹಿಸಿಡಲಾಗಿತ್ತು. ಬಳಿಕ ಗಾಂಜಾವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು ಕೇರಳದಿಂದ ಬೆಂಗಳೂರಿಗೆ ಕೊರಿಯರ್ ಮೂಲಕ 40 ಗ್ರಾಂ ಮೆಥಾಂಪೈಟಮೈನ್ ಡ್ರಗ್ಸ್ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಬೆಂಗಳೂರು ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ ಡ್ರಗ್ಸ್ ಮತ್ತು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.