ಬೆಂಗಳೂರು: ಅನಿವಾರ್ಯವಾದರೆ ಬುಲ್ಡೋಜರ್ ಪ್ರಯೋಗ ಕ್ರಮವನ್ನು ಕಾನೂನು ಮೂಲಕ ತರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಜಯನಗರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕೋರ್ ಕಮಿಟಿ ಸಭೆ ಬಳಿಕ ಜಗದೀಶ್ ಶೆಟ್ಟರ್, ಆರ್.ಅಶೋಕ್, ವಿ. ಸೋಮಣ್ಣ, ತೇಜಸ್ವಿಸೂರ್ಯ, ತೇಜಸ್ವಿನಿ ಅನಂತ್ ಕುಮಾರ್ ಸೇರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಗಲಭೆಗಳನ್ನು ಅಲ್ಲಿನ ಸರ್ಕಾರಗಳು ನಿಯಂತ್ರಣ ಮಾಡಿದೆ. ರಾಜಕೀಯ ಪ್ರೇರಿತ ಗಲಭೆಗಳು ಚುನಾವಣಾ ವರ್ಷದಲ್ಲಿ ಹೆಚ್ಚಾಗಲಿವೆ. ಇದನ್ನು ನಿಯಂತ್ರಿಸಲು ಕಠೋರವಾದ ಕಾನೂನು ಬೇಕು.
ಪೊಲೀಸರ ಸ್ಥೈರ್ಯ, ಸಮಾಜದ ಸ್ಥೈರ್ಯ ಕುಗ್ಗಿಸುವ ಕೆಲಸ, ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವ ಕೃತ್ಯ ಭಯೋತ್ಪಾದನೆಗೆ ಸಮಾನವಾದ ಕೃತ್ಯ. ಇದನ್ನು ದಿಟ್ಟವಾಗಿ ಸರ್ಕಾರ ನಿಯಂತ್ರಿಸಬೇಕು. ಅಂತವರ ಆಸ್ತಿ ಮುಟ್ಟುಗೋಲು ಹಾಕುವುದರಲ್ಲಿ ತಪ್ಪಿಲ್ಲ. ಅನಿವಾರ್ಯತೆ ಬಂದಾಗ ಬುಲ್ಡೋಜರ್ ಪ್ರಯೋಗವನ್ನು ಕಾಯ್ದೆ ತಂದು ಮಾಡಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿರುವುದು.. ಮೊದಲು ಸಿದ್ದರಾಮಯ್ಯ, ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಿಂದ ಹೊರ ಬರಲಿ. ಆಗ ಕಾಂಗ್ರೆಸ್ಗೆ ಒಳ್ಳೆಯದಾಗುತ್ತದೆ. ಅವರ ಪಕ್ಷದಲ್ಲಿ ರಾಹುಲ್ ಗಾಂಧಿ, ಡಿಕೆಶಿ ಬೇಲ್ ಮೇಲೆ ಹೊರಗಿದ್ದಾರೆ. ಆದರೂ ಇವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರು ಕಾಂಗ್ರೆಸ್ನಿಂದ ಹೊರ ಬಂದು ಬಳಿಕ ತನಿಖೆ ಮಾಡಲು ಆಗ್ರಹಿಸಲಿ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ಕೊಡುತ್ತಿದೆ. ಮತೀಯವಾದದ ಹೆಸರಲ್ಲಿ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡ್ತಿದೆ. ಡಿಜೆಹಳ್ಳಿ, ಕೆಜಿಹಳ್ಳಿ, ಹರ್ಷ ಕೊಲೆ ಪ್ರಕರಣ, ಹಿಜಾಬ್, ಹುಬ್ಬಳ್ಳಿ ಪ್ರಕರಣಗಳಲ್ಲಿ ಮತೀಯವಾದ ಅನುಸರಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ನಿಂದ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಹೊರ ಬರುತ್ತೇನೆ : ಕೆ.ಎಸ್.ಈಶ್ವರಪ್ಪ ವಿಶ್ವಾಸ
ಭ್ರಷ್ಟಾಚಾರ ಪ್ರಾರಂಭಿಸಿದ್ದೇ ಕಾಂಗ್ರೆಸ್. ಇವರೇ ಮಾಡಿರೋ ಭ್ರಷ್ಟಾಚಾರವನ್ನು ಇನ್ನೊಂದು ಪಕ್ಷದ ಮೇಲೆ ಹಾಕ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.