ಬೆಂಗಳೂರು: ಮೂರು ತಂಡಗಳಲ್ಲಿ ರಾಜ್ಯ ಬಿಜೆಪಿ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರ ತಂತ್ರದ ಭಾಗವಾಗಿ ಎರಡು ರೀತಿಯ ಪ್ರವಾಸ ಮಾಡಲಿದ್ದೇವೆ. ಸಿಎಂ ನೇತೃತ್ವದಲ್ಲಿ 50 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ನಡೆಯಲಿದೆ. ನನ್ನ ನೇತೃತ್ವದಲ್ಲಿ ಒಂದು ತಂಡ ಪ್ರವಾಸ ಮಾಡಲಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಕೂಡ ಒಂದು ತಂಡ ಪ್ರವಾಸ ಮಾಡುತ್ತದೆ. ಜನೋತ್ಸವ ಕೂಡ ದೊಡ್ಡ ಸಮಾವೇಶ ಆಗಲಿದೆ. ಕೇಂದ್ರದ ನಾಯಕರು ಸಮಾವೇಶಕ್ಕೆ ಬರಲಿದ್ದಾರೆ. ಇನ್ನೆರಡು ದಿನದಲ್ಲಿ ದಿನಾಂಕ ನಿಗದಿ ಮಾಡಲಿದ್ದೇವೆ ಎಂದರು.
ಸಿದ್ದರಾಮಯ್ಯ ಹೇಳಿಕೆ ಖಂಡಿಸಿದ ಕಟೀಲ್: ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ನಮಗೆ ದುಃಖ ಆಗಿರೋದು ಅವರ ಹೇಳಿಕೆಯಿಂದ. ಸಾವರ್ಕರ್ ಇತಿಹಾಸ, ಸ್ವಾತಂತ್ರ್ಯ ಇತಿಹಾಸ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಜಾತಿ ಬಣ್ಣ, ಕೋಮು ಭಾವನೆ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಸಾವರ್ಕರ್ ತಮ್ಮ ಮನೆತನವನ್ನೇ ಹೋರಾಟಕ್ಕೆ ಮೀಸಲಿಟ್ಟಿದ್ರು. ಎರಡು ಬಾರಿ ಕರಿ ನೀರಿ ಶಿಕ್ಷೆ ಅನುಭವಿಸಿದರು. ಅವರ ಬಗ್ಗೆ ಈ ರೀತಿಯ ಹೇಳಿಕೆ ಸರಿಯಲ್ಲ.ಅವರ ಫೋಟೋ ಇಡೀ ರಸ್ತೆಯಲ್ಲಿ ಎಲ್ಲಿ ಬೇಕಾದ್ರೂ ಹಾಕಬಹುದು. ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಬೇಕು ಎಂದು ಆಗ್ರಹಿಸಿದರು.