ದೊಡ್ಡಬಳ್ಳಾಪುರ: ನಾಗರ ಪಂಚಮಿಯ ದಿನ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ಬಂದ್ ಮಾಡಲಾಗಿದೆ. ದೇವಸ್ಥಾನದ ಹೊರಗಡೆಯ ನಾಗರ ಕಲ್ಲುಗಳಿಗೆ ಭಕ್ತರು ಪೂಜೆ ಮಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ನಾಗಾರಾಧನೆಯ ಪ್ರಮುಖ ಧಾರ್ಮಿಕ ಕ್ಷೇತ್ರ. ನಾಗರ ಪಂಚಮಿ ದಿನ ಘಾಟಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕೊರೊನಾ ಮೂರನೇ ಅಲೆಯ ಆತಂಕವಿದ್ದು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇದ್ದು, ದೈನಂದಿನ ಪೂಜಾ ಕಾರ್ಯಗಳನ್ನು ಹೊರತುಪಡಿಸಿ, ವಿಶೇಷ ದಿನಗಳಾದ ಶ್ರಾವಣ ಮಾಸದ ಶನಿವಾರ, ಭಾನುವಾರ, ರಜಾ ದಿನಗಳಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.