ಬೆಂಗಳೂರು: ರಾಜಧಾನಿಯಲ್ಲಿ ಪ್ರತೀ ವಾರ್ಡ್‌ನಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಿರುವ ನಿಯಮವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಪಾಲಿಕೆಯನ್ನು ಒತ್ತಾಯಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿರುವ ಅವರು, ಈ ನಿಯಮ ಹಾಸ್ಯಾಸ್ಪದ ಎಂದು ತಿಳಿಸಿದ್ದಾರೆ.
ಕಳೆದೆರಡು ವಾರ್ಷಿಕ ಸಾಲಿನಲ್ಲಿ ಕೋವಿಡ್ ಮೊದಲನೇ ಅಲೆ ಮತ್ತು ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ವಾರ್ಡಿಗೆ 1 ಗಣೇಶ ಮೂರ್ತಿಯನ್ನು ಕೂರಿಸಲು ಅವಕಾಶ ನೀಡಿ, ಆದೇಶ ಹೊರಡಿಸಲಾಗಿತ್ತು. ಆದರೆ, ಅದು ಆಗಿನ ಪರಿಸ್ಥಿತಿಗೆ ಸಮಂಜಸವಾಗಿತ್ತು ಎಂದು ಹೇಳಿದ್ದಾರೆ.
ಪ್ರಸ್ತುತ ಕೋವಿಡ್ ಸಂಬಂಧಿಸಿದ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಹೀಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಲಕ್ಷಾಂತರ ಮಂದಿ ಸೇರುವ ರಾಜಕೀಯ ಕಾರ್ಯಕ್ರಮಗಳು, ಜಾತ್ರಾ ಮಹೋತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಿಗೆ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.