ಬೆಂಗಳೂರು: ನಗರ ಅಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನ ಹಂಚಿಕೆಯಲ್ಲಿ ಮತ್ತೊಂದು ಭ್ರಷ್ಟಚಾರದ ಆರೋಪ ಕೇಳಿಬಂದಿದೆ.
ಹೌದು, ಕುಮಾರಸ್ವಾಮಿ ಬಡಾವಣೆಯ 2 ನೇ ಹಂತದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಹಾಗೂ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ನ ಕಾರ್ಯದರ್ಶಿ ಆಗಿರುವ ವೆಂಕಟೇಶ್ ಮೂರ್ತಿ ಅಕ್ರಮವಾಗಿ ಖಾತೆ ಮಾಡಿಸಿಕೊಂಡು ಆ ಜಾಗದಲ್ಲಿ ಖಾಸಗಿ ಶಾಲೆ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ನಗರ ವಕ್ತಾರ ಎನ್.ಆರ್ ರಮೇಶ್ ಬಿಡಿಎಗೆ ವೆಂಕಟೇಶ್ ಮೂರ್ತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಮಾಜಿ ಮೇಯರ್ ವಿರುದ್ಧ ಭೂ ಕಬಳಿಕೆ ಆರೋಪ ಸುಮಾರು ಹದಿನೈದು ಕೋಟಿ ರೂ. ಮೌಲ್ಯದ ನಾಲ್ಕು ಸಿಎ ಸೈಟ್ಗಳನ್ನ ಕಬಳಿಸಿದ್ದು, ಸುಮಾರು 12 ಸಾವಿರ ಚದರ ಅಡಿ ವಿಸ್ತೀರ್ಣವಿರುವ ಸಿಎ ಜಾಗದಲ್ಲಿ ಖಾಸಗಿ ಶಾಲೆ 'ಬ್ಲಾಸಂ ಸ್ಕೂಲ್' ನಿರ್ಮಿಸಿ ಖಾಸಗಿಯವರಿಗೆ ನೀಡಿ ಲಕ್ಷಾಂತರ ರೂಪಾಯಿ ಬಾಡಿಗೆ ಪಡೆಯಿತ್ತಿದ್ದಾರೆ. ಈ ನಿವೇಶನಕ್ಕೆ ಬಿಡಿಎ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ. ಹೀಗಾಗಿ ಸಿಎ ಸೈಟ್ ಕಬಳಿಕೆ ಸಂಬಂಧ ಬಿಎಂಟಿಎಫ್, ಬಿಡಿಎ ನಲ್ಲಿ ಎನ್ ರಮೇಶ್ ದೂರು ದಾಖಲು ಮಾಡಿದ್ದಾರೆ. ಕೂಡಲೇ ಕಟ್ಟಡ ತೆರವು ಮಾಡಿ, ಬಿಡಿಎ ಸುಪರ್ದಿಗೆ ಪಡೆಯುವಂತೆ ಒತ್ತಾಯಿಸಿದ್ದಾರೆ.
ಆದ್ರೆ, ಈ ಆರೋಪವನ್ನು ತಳ್ಳಿಹಾಕಿರುವ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮೂಲತಃ ಅದು ದೇವಸ್ಥಾನದ ಟ್ರಸ್ಟಿಯವರ ಜಾಗ. ಹೀಗಾಗಿ ದೇವಸ್ಥಾನ ಹಾಗೂ ಶಾಲೆ ನಿರ್ಮಾಣಕ್ಕೆಂದು ಬಿಡಿಎಯವರು ಬಿಟ್ಟಿದ್ದರು. ಐವತ್ತು ವರ್ಷದ ಹಿಂದೆಯೇ ಶಾಲೆ ಕಟ್ಟಲು ಅನುಮತಿ ಇದೆ. ಬಳಿಕ ಬಿಡಿಎಗೆ 17 ಲಕ್ಷ ರೂ. ಕಟ್ಟಿ ದಾಖಲೆಗಳನ್ನು ಮಾಡಿಕೊಳ್ಳಲಾಗಿದೆ. ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಅಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಬಿಡಿಎ ಅವರು ಕಟ್ಟಡ ನೆಲಸಮ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್, ಈ ಪ್ರಕರಣ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಪ್ಪು ಕಂಡುಬಂದರೆ ಕಟ್ಟಡವನ್ನು ಕೂಡಲೇ ನೆಲಸಮ ಮಾಡಲಾಗುವುದು ಎಂದರು.