ಬೆಂಗಳೂರು : ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಮೈಸೂರು ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ನಾಲ್ವರು ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ಮಾಡಿದ ನಂತರವೂ ತಮಗೆ ಜಮೀನು ಮಂಜೂರು ಮಾಡಿಲ್ಲ ಎಂದು ಮೈಸೂರಿನ ನಿವೃತ್ತ ಯೋಧರಾದ ಕೆ.ಬಿ.ನಾಣಯ್ಯ, ಬಿ.ಎನ್. ಶಿವಲಿಂಗಪ್ಪ, ಕೆ.ಬಿ.ಭೀಮಯ್ಯ ಮತ್ತು ಇಕ್ಬಾಲ್ ಹುಸೇನ್ ವಿಭಾಗೀಯ ಪೀಠದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಮೈಸೂರು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಜೀವದ ಹಂಗು ತೊರೆದು ದೇಶ ಸೇವೆ ಮಾಡಿದ ಯೋಧರಿಗೆ ಭೂಮಿ ಮಂಜೂರು ಮಾಡದೇ ವಿಳಂಬ ಮಾಡಿರುವ, ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಿರುವುದು ಸರಿಯಾದ ನಡವಳಿಕೆಯಲ್ಲ. ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ಬಳಿಕ ಭೂಮಿ ಹಂಚಿಕೆ ಮಾಡಲು ನೆಪಗಳನ್ನು ಹುಡುಕುತ್ತಿದ್ದೀರಿ ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಅಲ್ಲದೇ, ಕೂಡಲೇ ಭೂಮಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಿರುವುದಾಗಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.