ಕರ್ನಾಟಕ

karnataka

ETV Bharat / city

ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವುದಷ್ಟೇ ನನ್ನ ಕೆಲಸ: ಸದಾನಂದಗೌಡ

ಅಧಿಕಾರದಿಂದ ಕೆಳಗಿಳಿದಾಗಲೂ ಇಷ್ಟೊಂದು ಪ್ರೀತಿ, ಅಭಿಮಾನ ತೋರಿದ ಕಾರ್ಯಕರ್ತರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಇದು ಇನ್ನಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಸಂಘಟಿಸೋಣ ಎಂದು ಮಾಜಿ ಸಚಿವ ಡಿ.ವಿ ಸದಾನಂದಗೌಡ ಕರೆ ನೀಡಿದ್ದಾರೆ.

  My job is to manage the party's responsibilities: Sadanandagowda
My job is to manage the party's responsibilities: Sadanandagowda

By

Published : Jul 9, 2021, 11:47 PM IST

ಬೆಂಗಳೂರು: ರಾಜಕೀಯದಲ್ಲಿ ಮಾನ-ಅಪಮಾನ, ಏಳು-ಬೀಳು ಸಹಜವಾಗಿದೆ. ನನಗಂತೂ ಇದರ ಅನುಭವ ಸಾಕಷ್ಟಾಗಿದೆ. ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವುದಷ್ಟೇ ನನ್ನ ಕೆಲಸ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ. ಈ ಮೂಲಕ ಹೊಸ ಜವಾಬ್ದಾರಿಗೆ ಸಿದ್ಧ ಎನ್ನುವ ಸಂದೇಶ ನೀಡಿದರಾ ? ಎನ್ನುವ ಅನುಮಾನ ಹುಟ್ಟು ಹಾಕಿದ್ದಾರೆ.

ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ನಗರಕ್ಕೆ ವಾಪಸ್ಸಾದ ಡಿವಿ ಸದಾನಂದ ಗೌಡರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರಿಂದ ಭಾವನಾತ್ಮಕ ಸ್ವಾಗತ ಸಿಕ್ಕಿತು.

ನಮ್ಮ ಸಂಸದರು ನಮ್ಮ ಹೆಮ್ಮೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು. ವಿಮಾನ ನಿಲ್ದಾಣದಿಂದ ಮನೆಗೆ (ಆರ್. ಎಂ.ವಿ. 2ನೇ ಹಂತ) ತೆರಳುವ ಮಾರ್ಗದಲ್ಲಿ ಶೆಟ್ಟಿಗೆರೆ, ದೊಡ್ಡಜಾಲ, ಮೀನುಕುಂಟೆ, ಹೊಸೂರು, ಶೆಟ್ಟಿಹಳ್ಳಿ ಇವೇ ಮುಂತಾದ ಕಡೆ ವಾಹನ ನಿಲ್ಲಿಸಿ ಹೂಮಳೆಗೈದರು. ಕಾರ್ಯಕರ್ತರ ಪ್ರೀತಿ ಅಭಿಮಾನ ನೋಡಿ ಸದಾನಂದ ಗೌಡರಿಗೆ ಆನಂದ ಭಾಷ್ಪ ತುಂಬಿಬಂತು.

ಕೆಲವುಕಡೆ ಅವರು ಗದ್ಗದಿತರಾದ ಪ್ರಸಂಗವೂ ನಡೆಯಿತು.ಅಲ್ಲಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸದಾನಂದ ಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸೋಣ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನಿಷ್ಠ 7 ಸ್ಥಾನಗಳನ್ನು ಗೆಲ್ಲುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು.

ಅಧಿಕಾರದಿಂದ ಕೆಳಗಿಳಿದಾಗಲೂ ಇಷ್ಟೊಂದು ಪ್ರೀತಿ, ಅಭಿಮಾನ ತೋರಿದ ಕಾರ್ಯಕರ್ತರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಇದು ಇನ್ನಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿ ಸಂಘಟಿಸೋಣ ಎಂದು ಕರೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು,ಸಂಪುಟ ಪುನರ್​ರಚನೆಯ ದಿನ ಬೆಳಿಗ್ಗೆ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ದೂರವಾಣಿ ಮಾಡಿ ನಾನೂ ಸೇರಿದಂತೆ ಹಲವು ಹಿರಿಯ ಸಚಿವರ ಸೇವೆಯು ಪಕ್ಷಕ್ಕೆ ಬೇಕಾಗಿದೆ ಎಂದರು. ಪಕ್ಷದ ತೀರ್ಮಾನದಂತೆ ಸಚಿವ ಸ್ಥಾನ ತ್ಯಜಿಸಿದೆ ಎಂದರು.

ಕಾರ್ಯಕರ್ತರು ತಮ್ಮ ನಾಯಕ ದೊಡ್ಡ ದೊಡ್ಡ ಹುದ್ದೆಗೆ ಏರಬೇಕು ಎಂದು ಬಯಸುವುದು ಸಹಜ. ಅದು ಅವರ ಇಚ್ಛೆಯಿರಬಹುದಷ್ಟೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನೆಂದೂ ಯಾವುದೇ ಹುದ್ದೆಯ ಹಿಂದೆಬಿದ್ದವನಲ್ಲ. ಕಳೆದ 27 ವರ್ಷಗಳಲ್ಲಿ ಶಾಸಕನಾಗಿ, ಸಂಸದನಾಗಿ, ರಾಜ್ಯ ಘಟಕದ ಅಧ್ಯಕ್ಷನಾಗಿ, ಮುಖ್ಯಮಂತ್ರಿಯಾಗಿ, ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕನಾಗಿ, ಕೇಂದ್ರದಲ್ಲಿ 7 ವರ್ಷಗಳ ಕಾಲ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಪಕ್ಷ ನೀಡಿತು. ಪಕ್ಷ ಏನೆಲ್ಲ ಆದೇಶ, ಜವಾಬ್ದಾರಿಯನ್ನು ನೀಡಿತೋ ಅದನ್ನೆಲ್ಲ ಶಿರಸಾವಹಿಸಿ ಪಾಲಿಸಿದ್ದೇನೆ. ಮುಂದೆಯೂ ಪಾಲಿಸುತ್ತೇನೆ ಎಂದರು. ಆ ಮೂಲಕ ಭವಿಷ್ಯದ ಜವಾಬ್ದಾರಿಗೆ ಸಿದ್ಧ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ.

ಡಿವಿಎಸ್ ಭೇಟಿಯಾದ ಅಶ್ವತ್ಥನಾರಾಯಣ್:

ಡಿ.ವಿ.ಸದಾನಂದಗೌಡರು ನಗರಕ್ಕೆ ಆಗಮಿಸುತ್ತಿದ್ದಂತೆ ಅವರ ನಿವಾಸಕ್ಕೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಭೇಟಿ ನೀಡಿದರು.ಕೆಲಕಾಲ ಮಾತುಕತೆ ನಡೆಸಿದರು. ಕೇಂದ್ರದಲ್ಲಿನ ಕರ್ತವ್ಯದ ಮೆಲುಕು ಹಾಕುವ ಜೊತೆಗೆ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚಿಸಿದರು.

ABOUT THE AUTHOR

...view details