ಬೆಂಗಳೂರು: ಕೌಶಲ್ಯಭರಿತ ಕರ್ನಾಟಕ ನನ್ನ ಕನಸಾಗಿದ್ದು, ಎಲ್ಲರಿಗೂ ಕೌಶಲ್ಯ ತರಬೇತಿ ಸಿಗುವಂತಹ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನ ನಡೆಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಿಶ್ವ ಯುವ ಕೌಶಲ್ಯ ದಿನ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕವಾಗಿ ದೇವರು ಕೊಟ್ಟಿರುವ ಪ್ರಕ್ರಿಯೆಗೆ ನಾವು ಸ್ವಲ್ಪ ಜ್ಞಾನ ಸೇರಿಸಬೇಕು ಅದೇ ಕೌಶಲ್ಯ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲಿನ ಗುಣಾತ್ಮಕ ಕೌಶಲ್ಯ ಗುರುತಿಸುವ ಕೆಲಸ ಮಾಡಬೇಕು. ಕೌಶಲ್ಯವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಕೌಶಲ್ಯಕ್ಕೆ ಜ್ಞಾನ ಕೊಟ್ಟು ಉಪಯೋಗಿಸಿಕೊಂಡಾಗ ಅದರ ಬೆಲೆ ಇಮ್ಮಡಿಯಾಗುತ್ತದೆ ಎಂದರು.
ದೇಶವನ್ನು ಕಟ್ಟುವವರು ದುಡಿಯುವ ವರ್ಗ, ಅವರ ಮೇಲೆ ಆರ್ಥಿಕತೆ ನಿಂತಿದೆ. ಪ್ರಸ್ತುತ ದಿನಮಾನದಲ್ಲಿ ಕೌಶಲ್ಯ ಅತ್ಯಗತ್ಯವಾಗಿದೆ. ಎಲ್ಲರಿಗೂ ಕೌಶಲ್ಯ ತರಬೇತಿ ಸಿಗಬೇಕಾದರೆ, ಕೌಶಲ್ಯ ಕೊಡುವವರು, ಪಡೆದುಕೊಳ್ಳುವವರನ್ನು ಒಂದೇ ಕಡೆ ಸೇರಿಸಬೇಕು. ಆ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಸ್ವಾತಂತ್ರ್ಯದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ 75 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ನೀಡಿದ್ದೆ. ಅದನ್ನು ಸಚಿವ ಅಶ್ವತ್ಥ ನಾರಾಯಣ ಮಾಡುತ್ತಿದ್ದಾರೆ. ಗುರಿ ತಲುಪುತ್ತಿದ್ದಾರೆ. ಕೌಶಲ್ಯಾಭಿವೃದ್ಧಿಯಲ್ಲಿ ದೇಶಕ್ಕೆ ಮೊದಲ ಸ್ಥಾನ ಹಾಗೂ ಜಗತ್ತಿನಲ್ಲಿ ಹತ್ತನೆ ಸ್ಥಾನದೊಳಗೆ ಬರುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯಲಿದೆ ಎಂದರು.