ಬೆಂಗಳೂರು :ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಸಚಿವ ಆರ್.ಅಶೋಕ್ ವಿಧಾಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ.. ಇಂದು ಪ್ರಶ್ನೋತ್ತರ ವೇಳೆ ಶಾಸಕ ಬಸನಗೌಡ ದದ್ದಲ್ ಅವರ ಪ್ರಶ್ನೆಗೆ ಮುಜರಾಯಿ ಸಚಿವರ ಪರವಾಗಿ ಉತ್ತರಿಸಿದ ಆರ್. ಅಶೋಕ್, ಮುಜರಾಯಿ ಇಲಾಖೆಯ ದೇವಸ್ಥಾನಗಳನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅಲ್ಲದೆ ಟ್ರಸ್ಟ್ಗಳನ್ನು ರಚನೆ ಮಾಡಲಾಗುತ್ತದೆ ಎಂಬುದು ಸಹ ಕೇವಲ ವದಂತಿ ಎಂದರು.
ಮುಜರಾಯಿ ಇಲಾಖೆಯ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಗೆ ಸಾಕಷ್ಟು ಆದಾಯ ಬರುತ್ತದೆ. ಅಲ್ಲಿ ಬರುವ ಆದಾಯವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಮುಜರಾಯಿ ದೇವಸ್ಥಾನಗಳಿಗೆ ಬರುವ ಆದಾಯಕ್ಕೆ ಅನುಗುಣವಾಗಿ ನಾವು ವಿಧಾನಸಭಾ ಕ್ಷೇತ್ರವಾರು ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 115 ದೇವಸ್ಥಾನಗಳಿವೆ. ಈ ದೇವಾಲಯಗಳಿಗೆ ಅನುದಾನದ ಅಗತ್ಯವಿದ್ದರೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಉತ್ತರಿಸಿದರು.
ಇದನ್ನೂ ಓದಿ:ಜಾತಿ ಸೂಚಕ ಇರುವ ಗ್ರಾಮಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ : ಸಚಿವ ಆರ್. ಅಶೋಕ್