ಬೆಂಗಳೂರು:ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಅನ್ಯಕೋಮಿನವರಿಂದ ಚಿನ್ನವನ್ನೂ ಖರೀದಿ ಮಾಡಬಾರದು ಎಂದು ಹಿಂದೂಪರ ಸಂಘಟನೆಗಳು ನೀಡಿದ ಕರೆಗೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಚಿನ್ನದ ಬಿಸ್ಕತ್ಗಳು ಮುಸ್ಲಿಂ ರಾಷ್ಟ್ರಗಳಿಂದ ರಫ್ತಾಗುತ್ತವೆ. ಅವರ ಅಂಗಡಿಗಳಲ್ಲಿ ಮಾತ್ರ ಚಿನ್ನ ಖರೀದಿ ಮಾಡಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿವೆ.
ಈ ಬಗ್ಗೆ ವಿಡಿಯೋ ಮಾಡಿ ಮಾತನಾಡಿರುವ ಮುಸ್ಲಿಂ ಮುಖಂಡ ಮಹಮ್ಮದ್ ಖಾಲೀದ್, ಚಿನ್ನದ ಬಿಸ್ಕೆಟ್ ಬರುವುದು ಮುಸ್ಲಿಂ ರಾಷ್ಟ್ರಗಳಿಂದ, ಮುಸ್ಲಿಂ ಚಿನ್ನದ ಅಂಗಡಿಗಳಲ್ಲಿ ಖರೀದಿ ಮಾಡಬಾರದು ಎಂದು ಕರೆ ನೀಡಿದ್ದು ಸರಿಯಲ್ಲ. ಭಾರತದಲ್ಲಿ 25 ಟನ್ ಚಿನ್ನ ಉತ್ಪಾದನೆಯಾಗುತ್ತಿದೆ. 924 ಟನ್ ಚಿನ್ನ ಭಾರತದಲ್ಲಿ ಬಳಕೆ ಮಾಡಲಾಗುತ್ತಿದೆ. ಉಳಿದ ಶೇ.80ರಷ್ಟು ಚಿನ್ನ ಆಮದಾಗುತ್ತಿದೆ.
ಇದೆಲ್ಲವನ್ನೂ ಟರ್ಕಿ ಮತ್ತು ಯುನೈಟೆಡ್ ಅರಬ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಅರಬ್ನಿಂದ 234 ಮಿಲಿಯನ್ ಡಾಲರ್ ಮೌಲ್ಯದ ಚಿನ್ನ ಬಂದಿದೆ. ಟರ್ಕಿಯಿಂದ 62.8 ಮಿಲಿಯನ್ ಡಾಲರ್ ಮೌಲ್ಯದ ಚಿನ್ನ ಬಂದಿದೆ. ಮುಸ್ಲಿಂ ರಾಷ್ಟ್ರಗಳಿಂದ ಚಿನ್ನ ಆಮದು ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಲಾಜಿಕ್ ಇಲ್ಲದ ಅಭಿಯಾನ ಮಾಡುತ್ತಿದ್ದಾರೆ. ಎಲೆಕ್ಷನ್ ಟಿಕೆಟ್ ದಾಹಕ್ಕೆ ಮುತಾಲಿಕ್ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ ಎಂದು ಖಾಲೀಫ್ ಕಿಡಿಕಾರಿದ್ದಾರೆ.