ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರ ಸಕ್ಕರೆ ರಫ್ತು ಸಬ್ಸಿಡಿ ನೀಡದಿದ್ದರೆ ರೈತರಿಗೆ ಹಣ ಪಾವತಿ ಕಷ್ಟ: ಮುರುಗೇಶ್ ನಿರಾಣಿ - benglore leatest news

ರೈತರು ತಾವು ಪೂರೈಸುವ ಕಬ್ಬಿಗೆ ಬೇಗನೆ ಹಣ ಪಾವತಿ ಮಾಡುವುದಕ್ಕೆ ಆಗ್ರಹ ಮಾಡುತ್ತಿದ್ದಾರೆ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಬಹಳ ದಿನಗಳು ಕಳೆದಿವೆ. ರೈತರು ಕಬ್ಬಿನ ಬಿಲ್ಲಿಗೆ ಆಗ್ರಹ ಮಾಡುವುದು ನ್ಯಾಯಸಮ್ಮತವಾಗಿದೆ. ಆದರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಬರಬೇಕಾದ ನೂರಾರು ಕೋಟಿ ಹಣ ಬಾರದೆ ತೊಂದರೆಯಾಗಿದೆ.

murugesh nirani talk about subsidize the export of sugar
ಕೇಂದ್ರ ಸರ್ಕಾರ ಸಕ್ಕರೆ ರಫ್ತು ಸಬ್ಸಿಡಿ ನೀಡದಿದ್ದರೆ ರೈತರಿಗೆ ಹಣ ಪಾವತಿ ಕಷ್ಟ: ಮುರುಗೇಶ್ ನಿರಾಣಿ

By

Published : Sep 16, 2020, 2:56 PM IST

ಬೆಂಗಳೂರು: ಸಕ್ಕರೆ ರಫ್ತು ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಕಳೆದ ಆರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಕಾರಣದಿಂದಾಗಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿ ಮಾಡುವುದು ಕಷ್ಟವಾಗುತ್ತಿದೆ. ಇಡೀ ಸಕ್ಕರೆ ಉದ್ಯಮ ಹಾಗೂ ರೈತ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ಕೂಡಲೇ ಕೇಂದ್ರ ಸರ್ಕಾರ ಸಬ್ಸಿಡಿ ಹಣ ಬಿಡುಗಡೆ ಮಾಡಬೇಕು ಎಂದು ನಿರಾಣಿ ಶುಗರ್ಸ್ ಅಧ್ಯಕ್ಷ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.

ಸಕ್ಕರೆ ಉದ್ದಿಮೆಗೆ ಕೇಂದ್ರ ಸರ್ಕಾರ ಕೊಡಬೇಕಾಗಿರುವ ಸಕ್ಕರೆ ರಫ್ತು ಸಬ್ಸಿಡಿ ಸಹಾಯ ಹಣ ಕಳೆದ 6 ತಿಂಗಳಿಂದ ಪಾವತಿಯಾಗಿಲ್ಲ. ದೇಶದ ಸಕ್ಕರೆ ಕಾರ್ಖಾನೆಗಳು ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತು ಮಾಡಿವೆ. ಈ ರಫ್ತು ಮಾಡಿದ್ದಕ್ಕೆ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಿಗೆ 5610 ಸಾವಿರ ಕೋಟಿ ರೂ. ಸಬ್ಸಿಡಿ ಹಣ ಪಾವತಿ ಮಾಡಬೇಕಾಗಿದೆ. ಸಕ್ಕರೆ ಕಾರ್ಖಾನೆಗಳು ಈ ಹಣ ಪಾವತಿಗೆ ಸತತ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಮಹಾಮಂಡಳ ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ ಸಬ್ಸಿಡಿ ಪಾವತಿಗೆ ಆಗ್ರಹಪಡಿಸಿದೆ. ಈ ಹಣ ಬಾರದಿದ್ದರಿಂದ ರೈತರಿಗೆ ಕಬ್ಬಿನ ಬಿಲ್ಲು ಪಾವತಿ ಮಾಡುವುದಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.

ರೈತರು ತಾವು ಪೂರೈಸುವ ಕಬ್ಬಿಗೆ ಬೇಗನೆ ಹಣ ಪಾವತಿ ಮಾಡುವುದಕ್ಕೆ ಆಗ್ರಹ ಮಾಡುತ್ತಿದ್ದಾರೆ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿ ಬಹಳ ದಿನಗಳು ಕಳೆದಿವೆ. ರೈತರು ಕಬ್ಬಿನ ಬಿಲ್ಲಿಗೆ ಆಗ್ರಹ ಪಡಿಸುವುದು ನ್ಯಾಯ ಸಮ್ಮತವಾಗಿದೆ. ಆದರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಬರಬೇಕಾದ ನೂರಾರು ಕೋಟಿ ಹಣ ಬಾರದೆ ತೊಂದರೆಯಾಗಿದೆ. ಕೇಂದ್ರ ಸರ್ಕಾರದ ಸಚಿವಾಲಯದ ಹಿರಿಯ ಅಧಿಕಾರಿ ರಿತುರಾಜ ತಿವಾರಿ ಸರ್ಕಾರ ಪಾವತಿ ಮಾಡಬೇಕಾದ ಹಣದ ವಿವರವನ್ನು ಸಚಿವ ಸಂಪುಟದ ಗಮನಕ್ಕೆ ತಂದಿರುವುದಾಗಿ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಈ ಕಾರ್ಯ ತೀವ್ರವಾಗಿ ನೆರವೇರುವುದು ಅವಶ್ಯವಿದೆ ಎಂದರು.

ಸಕ್ಕರೆ ಕಾರ್ಖಾನೆಗಳು ಸಹ ವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುವ ವಿದ್ಯುತ್​​ಅನ್ನು ರಾಜ್ಯ ವಿದ್ಯುತ್ ಮಂಡಳಿ ಖರೀದಿಸಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಕಾರ್ಖಾನೆಗಳ ಮೂಲಗಳು ಆತಂಕ ವ್ಯಕ್ತಪಡಿಸಿವೆ. ವಿದ್ಯುತ್ ಖರೀದಿ ದರವನ್ನು ಕೂಡ ತೀವ್ರವಾಗಿ ಇಳಿಸಲಾಗಿದೆ. ಸಹ ವಿದ್ಯುತ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಮೊದಲು ಸಬ್ಸಿಡಿ ನೀಡಿ ಪ್ರೋತ್ಸಾಹ ನೀಡುತ್ತಿತ್ತು. ಈಗ ವಿದ್ಯುತ್ ಉತ್ಪಾದನೆ ರಾಜ್ಯದಲ್ಲಿ ಹೆಚ್ಚಾಗಿರುವುದರಿಂದ ವಿದ್ಯುತ್ ಖರೀದಿಗೆ ಹಿಂದೇಟು ಹಾಕುತ್ತಿರುವ ಸನ್ನಿವೇಶ ಉಂಟಾಗಿದೆ. ಬಯೋಮಾಸ್ ಮತ್ತು ಪವನ ವಿದ್ಯುತ್ ಖರೀದಿಗೆ ಹೆಚ್ಚು ಬೆಲೆ ನೀಡುತ್ತಿದ್ದು, ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ತಿಗೆ ಹೆಚ್ಚು ಬೆಲೆ ಯಾಕೆ ಕೊಡುತ್ತಿಲ್ಲ ಎಂಬುದು ಚರ್ಚಿಸಬೇಕಾದ ಸಂಗತಿಯಾಗಿದೆ ಎಂದು ಸಕ್ಕರೆ ಕಾರ್ಖಾನೆಗಳ ಆದಾಯ ಕುಸಿತದ ವಿವರ ನೀಡಿದ್ದಾರೆ.

ವಿದ್ಯುತ್ ಖರೀದಿ ದರ ಇಳಿಕೆಯಿಂದ ಕಾರ್ಖಾನೆಗಳಿಗೆ ಆರ್ಥಿಕ ಹಾನಿ ಉಂಟಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ತಿಗೆ 2008-13ರ ಅವಧಿಯಲ್ಲಿ ಪ್ರತೀ ಯುನಿಟ್‌ಗೆ 5 ರೂ., 40 ಪೈಸೆ ಸರ್ಕಾರ ಬೆಲೆ ಪಾವತಿ ಮಾಡುತ್ತಿತ್ತು. ಈಗ ಬೆಲೆಯನ್ನು 2.59 ಪೈಸೆ ಇಳಿಸಲಾಗಿದೆ. ವಿದ್ಯುತ್ ನಿಗಮ ಖರೀದಿಸಿದ ವಿದ್ಯುತ್ ಹಣ ಪಾವತಿ ಮಾಡುವುದಕ್ಕೆ ಬಹಳ ವಿಳಂಬ ಮಾಡುತ್ತಿವೆ ಎಂದು ಕೆಲವು ಕಾರ್ಖಾನೆಗಳು ಅಭಿಪ್ರಾಯ ವ್ಯಕ್ತಪಡಿಸಿದೆ. ಪವನ ವಿದ್ಯುತ್ ಲಾಭ ನೇರವಾಗಿ ಏಕವ್ಯಕ್ತಿಗೆ ತಲುಪುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕೊಡುವ ಹಣ ಇಡೀ ರೈತ ಸಮುದಾಯಕ್ಕೆ ಸಂದಾಯವಾಗುತ್ತದೆ. ಈ ಸರಳ ಸತ್ಯವನ್ನು ಅರಿತುಕೊಳ್ಳುವುದು ಅವಶ್ಯವಿದೆ ಎಂದರು.

ಎಥೆನಾಲ್‌ಗೂ ನ್ಯಾಯ ಸಮ್ಮತ ಬೆಲೆ ಇಲ್ಲ:

ಡಿಸ್ಟಿಲರಿ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತಿವೆ. ಎಥೆನಾಲ್ ಪೆಟ್ರೋಲ್‌ನೊಂದಿಗೆ ವಾಹನಗಳಿಗೆ ಬಳಸುವ ಇಂಧನವಾಗಿದೆ. ಎಥೆನಾಲ್​​ಅನ್ನು ಹೆಲಿಕಾಪ್ಟರ್ ಮತ್ತು ವಿಮಾನಗಳು ಬಳಸಬಹುದಾಗಿದೆ. ಎಥೆನಾಲ್ ಬೆಲೆಯನ್ನು ಸ್ವಲ್ಪಮಟ್ಟಿಗೆ ಸರ್ಕಾರ ಹೆಚ್ಚಿಸಿದರೂ ಇದು ನ್ಯಾಯ ಸಮ್ಮತ ಬೆಲೆ ಅಲ್ಲ ಎಂಬುದು ಕಾರ್ಖಾನೆಗಳ ಆಡಳಿತ ಮಂಡಳಿಗಳ ಅಭಿಪ್ರಾಯವಾಗಿದೆ. ಸರ್ಕಾರ ಆಸಕ್ತಿ ವಹಿಸಿ ಎಥೆನಾಲ್ ಉತ್ಪಾದಿಸುವುದಕ್ಕೆ ಪ್ರೋತ್ಸಾಹ ನೀಡಿದರೆ ವಿದೇಶದಿಂದ ಇಂಧನ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ತಗ್ಗಿಸಬಹುದು. ಇದರಿಂದ ಸಾಕಷ್ಟು ಆಮದು ಶುಲ್ಕ ಉಳಿಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವುದು ಅವಶ್ಯವಿದೆ ಎಂದು ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details