ಬೆಂಗಳೂರು: ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ಭಿನ್ನಮತದ ಚಟುವಟಿಕೆ ಬಗ್ಗೆ ಶಾಸಕ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿದ್ದಾರೆ.
ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಸಭೆ ಮಾಡಿದ್ರೆ ಅವರೆಲ್ಲ ಊಟಕ್ಕೆ ಸೇರಿರಬಹುದು ಅಷ್ಟೇ. ನಾನು ಯಾವುದೇ ಸಭೆಗೆ ಹೋಗಿರಲಿಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ನಿರಾಣಿ, ನಿನ್ನೆ ವಿಧಾನಸೌಧದಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದೆ. ಸಭೆ ಮುಗಿಸಿ ಕ್ಷೇತ್ರದ ಕೆಲಸದ ನಿಮಿತ್ತ ಸಂಜೆ ಸಿಎಂ ಬಿಎಸ್ ಭೇಟಿಯಾಗಿದ್ದೆ. ಎರಡು ಗಂಟೆ ಕಾಲ ಸಿಎಂ ಮನೆಯಲ್ಲಿದ್ದು ಸಮಾಲೋಚನೆ ನಡೆಸಿದ್ದೇನೆ. ನಂತರ ಸಚಿವ ಕೆ.ಎಸ್ ಈಶ್ವರಪ್ಪ ಮನೆಗೆ ಹೋಗಿ ಅಲ್ಲಿಂದ ನನ್ನ ಮನೆಗೆ ವಾಪಸ್ ಆಗಿದ್ದೇನೆ. ಭಿನ್ನಮತೀಯ ಸಭೆ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ನಾನು ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದೇನೆ, ನನ್ನ ಕ್ಷೇತ್ರದ ಸಂಬಂಧ ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಹಿರಿಯರು ಬಗೆಹರಿಸುತ್ತಾರೆ. ಸಂಪುಟ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ಸಿಎಂ, ಹೈಕಮಾಂಡ್‌ಗೆ ಸೇರಿದ್ದು. ಹಿಂದೆ ಕೈಗಾರಿಕೆ ಖಾತೆ ನೀಡಿದ್ದಾಗಲೂ ಕೇಳಿರಲಿಲ್ಲ, ಈಗಲೂ ಕೇಳಲ್ಲ. ಪ್ರತಿಭೆಗಳನ್ನ ಗುರುತಿಸಿ ಹಿರಿಯರು ಅವಕಾಶ ಮಾಡಿಕೊಡುತ್ತಾರೆ. ಯಾವುದೇ ರೀತಿಯ ಒತ್ತಾಯಕ್ಕೆ ಅವಕಾಶ ಸಿಗುವುದಿಲ್ಲ ಎಂದು ಲಾಭಿ ನಡೆಸುತ್ತಿಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿಗೆ ಲೋಕಸಭೆ ಸ್ಥಾನಕ್ಕೆ ಟಿಕೆಟ್ ಸಿಕ್ಕಿರಲಿಲ್ಲ. ಆದರೂ ಅವರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಆ ದಿನಗಳಲ್ಲಿ ಎಂಎಲ್‌ಸಿ, ರಾಜ್ಯಸಭೆಗೆ ಪರಿಗಣಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಈಗ ಆ ಸ್ಥಾನಗಳು ಖಾಲಿ ಇವೆ, ಅದಕ್ಕೆ ಮನವಿ ಮಾಡಿದ್ದಾರೆ ಅಷ್ಟೇ. ರಮೇಶ್ ಕತ್ತಿ ಪಕ್ಷಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ನಾನು ಪಕ್ಷಾವಂತ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಿಷ್ಠಾವಂತ ಕಾರ್ಯಕರ್ತನಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ ಎಂದರು.
ಎಸ್ ಆರ್ ಸಂತೋಷ್‌ಗೆ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿರೋದು ಸಂತಸವಿದೆ ಎಂದು ಮುರುಗೇಶ್ ನಿರಾಣಿ ಇದೇ ವೇಳೆ ತಿಳಿಸಿದರು.