ಬೆಂಗಳೂರು:ಅದು ರಂಗು- ರಂಗಿನ ಹೋಳಿ ಹಬ್ಬ. ಇಡೀ ಬೆಂಗಳೂರು ಬಣ್ಣದ ಹೊಳೆಯಲ್ಲಿ ಮಿಂದು ಹೋಗಿದ್ರೆ, ಆ ಇಬ್ಬರು ಯುವಕರು ಮಾತ್ರ ಮುಂದೆ ನಡೆಯಲಿರುವ ಕೊಲೆ ಬಗ್ಗೆ ಚಿಂತಿಸುತ್ತಿದ್ರು.
ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರೋ ಕಾಳಿದಾಸ ಬಡಾವಣೆಯಲ್ಲಿ, ಏಪ್ರಿಲ್ 12ರಂದು ರಾತ್ರಿ 8: 30ಕ್ಕೆ ಓರ್ವಯುವಕನನ್ನ ಇರಿದು ಕೊಲೆಗೈಯ್ಯಲಾಗಿತ್ತು. ಆತನ ಹೆಸರು ಭರತ್ ಅಲಿಯಾಸ್ ಡಾಲಿ. ಈತನ ಮೇಲೆ ಹಲವಾರು ಠಾಣೆಗಳಲ್ಲಿ ಕೇಸುಗಳಿತ್ತು. ಕೊಲೆಯಾದ ಜಸ್ಟ್ 2 ದಿನಗಳ ಹಿಂದಷ್ಟೇ, ಭರತ್ ಜೈಲಿನಿಂದ ಹೊರಗೆ ಬಂದಿದ್ದ. ಹೀಗಿರುವಾಗ ಬಂದ ಮಾರನೇ ದಿನವೇ ಭರತ್ನನ್ನ ಹೊಡೆದು ಕೊಂದು ಹಾಕಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಹನುಮಂತನಗರ ಪೊಲೀಸರಿಗೆ ಅದೊಂದು ಸಿಸಿಟಿವಿ ದೃಶ್ಯ ಸಿಕ್ಕಿತ್ತು. ಸಿಸಿಟಿವಿಯ ದೃಶ್ಯದಲ್ಲಿ ಭರತ್ನನ್ನ ಕೊಲೆಗೈದಿದ್ದು ಸ್ಪಷ್ಟವಾಗಿತ್ತೇ ವಿನಃ, ಕೊಲೆಗಾರರ ಮುಖಗಳ ಸ್ಪಷ್ಟ ಗುರುತು ಸಿಗಲಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಹಾಗೂ ಸ್ಥಳೀಯರ ಮಾಹಿತಿಯ ಮೇರೆಗೆ ಸದ್ಯ ವಿನೋದ್ ಮತ್ತು ಆಕಾಶ್ ಎಂಬ ಇಬ್ಬರನ್ನ ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಬಿತ್ತು ಹೆಣ ಇಲ್ಲಿ ದುರಂತ ಅಂದ್ರೆ, ಭರತ್ನ ಹತ್ಯೆಗೆ ಕಾರಣವಾಗಿದ್ದು ಹೋಳಿ ಹಬ್ಬದ ದಿನ ನಡೆದ ಕ್ಷುಲ್ಲಕ ಜಗಳ. ಕಾಳಿದಾಸ ಲೇಔಟ್ನಲ್ಲಿ ಭರತ್ ಬಿಯರ್ ಕುಡಿಯುತ್ತ ಕುಳಿತಿದ್ದ. ಅಂದು ವಿನೋದ್ ಮತ್ತು ಆಕಾಶ್ಗೆ ಭರತ್ ಬಣ್ಣ ಹಾಕಿದ್ದ. ಆ ವೇಳೆ ಎಳೆದಾಡಿ ನೂಕಾಡಿದ ಅಂತ ಜಗಳವೂ ಆಗಿತ್ತು. ಈ ವೇಳೆ ಭರತ್, ವಿನೋದನ ತಲೆಗೆ ಕುಡಿಯುತ್ತಿದ್ದ ಬಿಯರ್ ಬಾಟಲಿಯಿಂದ ಹೊಡೆದಿದ್ದ. ಇಡೀ ಏರಿಯಾದ ಜನರೆದುರು ಭರತ್ ತಮಗೆ ಬಿಯರ್ ಬಾಟಲಿಯಿಂದ ಹೊಡೆದ ಅನ್ನೋದು ಈ ಇಬ್ಬರ ಅವಮಾನಕ್ಕೆ ಕಾರಣವಾಗಿತ್ತು. ಅದೇ ರೋಷದಲ್ಲಿ ಸ್ಕೆಚ್ ರೂಪಿಸಿದ ಈ ಇಬ್ಬರು ಯುವಕರು, ಅಂದು ಸಂಜೆ ಕಂಠ ಪೂರ್ತಿ ಕುಡಿದು ಮನೆಗೆ ವಾಪಸ್ ಬರುತ್ತಿದ್ದ ಭರತ್ನನ್ನ ಮನೆ ಕೂಗಳತೆ ದೂರದಲ್ಲೇ ಇರಿದು ಹತ್ಯೆಗೈದು ಪರಾರಿಯಾಗಿದ್ರು. ಸದ್ಯ, ಪ್ರಕರಣ ಭೇದಿಸಿರೋ ಹನುಮಂತನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.