ಬೆಂಗಳೂರು: ನನಗೆ ನನ್ನ ಮನೆಗೆ ಬಂದಷ್ಟು ಖುಷಿಯಾಗುತ್ತಿದ್ದು, ಇಲ್ಲಿರುವ ಒಗ್ಗಟ್ಟು ನನಗೆ ಹಿಂದಿನ ಚುನಾವಣೆಗಳಲ್ಲಿ ಕಾಣಿಸಿರಲಿಲ್ಲ. ಈ ಚುನಾವಣೆ ಅಭಿವೃದ್ಧಿ ಪರವಾದ ಚುನಾವಣೆಯಾಗಿದೆ ಎಂದು ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಆರ್ಆರ್ ನಗರ ಉಪಚುನಾವಣೆ ಸಂಬಂಧ ಸಭೆ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಬಾಬುರಾವ್ ದೇಶಪಾಂಡೆ ಭವನಕ್ಕೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಬೆಳಗ್ಗೆ ಮತ್ತಿಕೆರೆಯಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಂತರ ಬಾಬುರಾವ್ ದೇಶಪಾಂಡೆ ಭವನದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗಿಯಾದರು. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಭಾರತದ ಉಸ್ತುವಾರಿ ಸಿಟಿ ರವಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು.
ನಂತರ ಬಾಬುರಾವ್ ದೇಶಪಾಂಡೆ ಭವನದಲ್ಲಿರುವ ಗಣೇಶನ ಗುಡಿಯಲ್ಲಿ ನಾಮಪತ್ರಕ್ಕೆ ಮುನಿರತ್ನ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುನಿರತ್ನ, ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದೆ. ಅಭಿವೃದ್ದಿ ಕೆಲಸಗಳನ್ನು ಮಾಡುವವರು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಜನ ನನ್ನ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.