ಬೆಂಗಳೂರು: ಖ್ಯಾತ ನಟ ಹಾಗೂ ವಿಧಾನ ಪರಿಷತ್ ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಾರ್ಟಿಯ ರಾಜ್ಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ನಿರ್ದೇಶನದಂತೆ ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಪಕ್ಷವನ್ನು ಸದೃಢವಾಗಿ ಬೆಳೆಸುವುದರಲ್ಲಿ ಚಂದ್ರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಜವಾಬ್ದಾರಿಯ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಪಕ್ಷವು ಸ್ವಚ್ಛ ರಾಜಕೀಯ ಹಾಗೂ ಪ್ರಾಮಾಣಿಕ ಆಡಳಿತ ನೀಡುತ್ತಿದೆ. ಇದನ್ನು ಕರ್ನಾಟಕದ ಜನತೆಗೆ ತಿಳಿಸಿ, ಇಲ್ಲಿ ಕೂಡ ಎಎಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಜನಸಂಪರ್ಕ ಹಾಗೂ ಪ್ರಚಾರ ಸಮಿತಿಯು ಶ್ರಮಿಸಲಿದೆ ಎಂದು ಹೇಳಿದರು.