ಬೆಂಗಳೂರು: ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1,781 ಕೋಟಿ ರೂಪಾಯಿಗಳಷ್ಟು ಅನುದಾನ ನೀಡುವ ಮೂಲಕ ಮುಜರಾಯಿ ಇಲಾಖೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕಳೆದ 10 ವರ್ಷಗಳಲ್ಲೇ ಅತಿಹೆಚ್ಚು ಅನುದಾನವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮುಜರಾಯಿ ಇಲಾಖೆಗೆ ಬಿಡುಗಡೆಗೊಳಿಸಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಅನುದಾನ ಹಂಚಿಕೆ ಬಗ್ಗೆ ವಿವರ ನೀಡಿ ಮಾತನಾಡಿದ ಅವರು ಹೆಚ್ಚಿನ ಅನುದಾನ ನೀಡುವ ಮೂಲಕ ಸಿಎಂ ಬೊಮ್ಮಾಯಿಯವರು ಪ್ರಧಾನಿ ನರೇಂದ್ರ ಮೋದಿ ಅವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸು ನನಸು ಮಾಡುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಗೆ ಬಲ ತುಂಬಿದ್ದಾರೆ. ಈ ವರ್ಷದ ಆಯವ್ಯಯದಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳು, ಮಠಗಳು ಹಾಗೂ ರಾಜ್ಯದ ಹೊರಭಾಗದಲ್ಲಿರುವ ಕರ್ನಾಟಕ ಛತ್ರಗಳ ಅಭಿವೃದ್ಧಿಗಾಗಿ ಒಟ್ಟು 421 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರವಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಈವರೆಗೂ (ಜುಲೈ 10, 2022 ರವರೆಗೆ) ಒಟ್ಟು 272 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಿದ್ದು, ಅದರಲ್ಲಿ ಶೇ. 50 ರಷ್ಟನ್ನು (136 ಕೋಟಿ ರೂ) ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೂ ಒಟ್ಟು ರೂ. 693 ಕೋಟಿ ಗಳಷ್ಟು (ಬಜೆಟ್ ಅನುದಾನ 421 ಕೋಟಿ + ವಿಶೇಷ ಅನುದಾನ ರೂ. 272 ಕೋಟಿ) ಬೃಹತ್ ಗಾತ್ರದ ಅನುದಾನ ಒದಗಿಸಲಾಗಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಹಲವಾರು ನೂತನ ಯೋಜನೆಗಳನ್ನ ಘೋಷಣೆ ಮಾಡಿ ಅನುಷ್ಠಾನಗೊಳಿಸಲಾಗುತ್ತಿದೆ. ದೈವ ಸಂಕಲ್ಪ (1140 ಕೋಟಿ ವೆಚ್ಚದಲ್ಲಿ 25 ಏ ದರ್ಜೆ ದೇವಾಲಯಗಳ ಸಮಗ್ರ ಅಭಿವೃದ್ದಿ), ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಕೆ, ಕಾಯಕಲ್ಪ (ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿಗೆ ವಿಶೇಷ ಅನುದಾನ), ಕಾಶಿ ಯಾತ್ರೆಗೆ ಸಹಾಯಧನ, ಕಾಶಿಗೆ ಭಾರತ್ ಗೌರವ್ ಯೋಜನೆಯ ಮೂಲಕ ರೈಲು, ಇಲಾಖೆಯ ನೌಕರರು ಹಾಗೂ ಅರ್ಚಕರಿಗೆ ವಿಮಾ ಸೌಲಭ್ಯ, ತಸ್ತಿಕ್ ಹಣ ಹೆಚ್ಚಳದಂತಹ ಯೋಜನೆಗಳಿಗೆ ಮುಖ್ಯಮಂತ್ರಿಗಳು ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.