ಬೆಂಗಳೂರು: ಸಚಿವ ಸ್ಥಾನ ಕೊಡಲು ಕಾನೂನು ತೊಡಕು ಇರುವ ಬಗ್ಗೆ ಗೊತ್ತಿಲ್ಲ. ಆದರೆ ನಮಗಂತೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಾತಿನ ಮೇಲೆ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸಿಎಂ ಬಿಎಸ್ವೈ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರು ನಮಗೆಲ್ಲ ಏನು ಮಾತು ಕೊಟ್ಟಿದ್ರೋ, ಆ ಮಾತಿನಂತೆ ಅವರು ನಡೆದುಕೊಳ್ತಾರೆ ಎಂಬ ನಂಬಿಕೆಯಿದೆ. ಅವರು ನಮ್ಮ ನಾಯಕರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇದೆ. ಪಕ್ಷಕ್ಕೆ ಬಂದ ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ನನಗೆ ಸಂಪುಟಕ್ಕೆ ಸೇರ್ಪಡೆಯಾಗದಿರೋದಕ್ಕೆ ಯಾವುದೇ ಬೇಸರ ಮತ್ತು ಅಸಮಾಧಾನವಿಲ್ಲ. 55 ದಿನಗಳ ನಂತರ ಗೆದ್ದವರಿಗೆ ಮಂತ್ರಿ ಸ್ಥಾನ ಸಿಗುತ್ತಿದೆ. ಅದಕ್ಕೆ ನನಗೆ ಸಂತೋಷವಿದೆ ಎಂದರು. ಆರ್. ಶಂಕರ್ ಅವರನ್ನು ಮುಂದೆ ಮಂತ್ರಿ ಮಾಡ್ತಾರೆ. ಈ ಬಗ್ಗೆ ಕೂಡ ನಾನು ಇವತ್ತು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಈ ಹಿಂದೆ ಏನು ಮಾತು ಕೊಟ್ಟಿದ್ದರೋ, ಆ ಮಾತಿನಂತೆ ಚಾಚೂ ತಪ್ಪದಂತೆ ನಡೆದುಕೊಳ್ತೇವೆ ಎಂದಿದ್ದಾರೆ. ಹೀಗಾಗಿ ಸಿಎಂ ಬಿಎಸ್ವೈ ಅವರ ಮಾತಿನ ಮೇಲೆ ನಂಬಿಕೆ ಇದೆ ಎಂದು ಸ್ಪಷ್ಟ ಪಡಿಸಿದರು. ನಾವು 17 ಜನರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಇದೇ ವೇಳೆ ತಿಳಿಸಿದರು.
ನನ್ನ ಸೋಲಿಗೆ ಆ ಅಪ್ಪ ಮಗನೇ ಕಾರಣ. ಅವರ ವಿರುದ್ಧ ಕ್ರಮ ಆಗಲೇಬೇಕು. ಈಗಾಗಲೇ ಸಿಎಂ ಬಿಎಸ್ವೈ ಅವರಿಗೆ ಒತ್ತಡ ಹಾಕಿದ್ದೇನೆ. ಸಂಪುಟ ವಿಸ್ತರಣೆಯಾದ ನಂತರ ಮತ್ತೊಮ್ಮೆ ಒತ್ತಾಯ ಮಾಡುತ್ತೇನೆ. ಸಿಎಂ ಬಿಎಸ್ವೈ ಸೇರಿದಂತೆ ಬಿಜೆಪಿ ನಾಯಕರಿಗೆ ಒತ್ತಾಯ ಹಾಕುವೆ ಎಂದು ಬಚ್ಚೇಗೌಡ ಹಾಗೂ ಶರತ್ ಬಚ್ಚೇಗೌಡ ವಿರುದ್ಧ ಕಿಡಿಕಾರಿದರು.