ಕರ್ನಾಟಕ

karnataka

ETV Bharat / city

ಕೈ ಪಕ್ಷಕ್ಕೆ ಹಿನ್ನೆಡೆ: ನಾಯಕರ ಕಣ್ತಪ್ಪಿಸಿ ಮುಂಬೈಗೆ ಹಾರಿದ ಎಂಟಿಬಿ ನಾಗರಾಜ್! - mtb left mumbay

ಕೈ ನಾಯಕರ ಮನವೊಲಿಕೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿ ರಾಜೀನಾಮೆ ವಾಪಸ್ ಪಡೆಯುವುದಾಗಿ ತಿಳಿಸಿದ್ದ ಶಾಸಕ ಎಂಟಿಬಿ ನಾಗರಾಜ್,ಇದೀಗ ಎಚ್​ಎಎಲ್ ಮೂಲಕ ವಿಶೇಷ ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸಿದರು.

ಕೈ ನಾಯಕರ ಕಣ್ತಪ್ಪಿಸಿ, ಮುಂಬೈ ವಿಮಾನವೇರಿದ ಎಂಟಿಬಿ ನಾಗರಾಜ್

By

Published : Jul 14, 2019, 11:59 AM IST

ಬೆಂಗಳೂರು:ನಿನ್ನೆ ಇಡೀ ದಿನ ಕೈ ನಾಯಕರ ಮನವೊಲಿಕೆಯಿಂದ ತೀವ್ರ ಒತ್ತಡಕ್ಕೆ ಸಿಲುಕಿ ರಾಜೀನಾಮೆ ವಾಪಸ್ ಪಡೆಯುವುದಾಗಿ ತಿಳಿಸಿದ್ದ ಎಂಟಿಬಿ ನಾಗರಾಜ್, ಇದೀಗ ಎಚ್​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿ ಕುತೂಹಲ ಮೂಡಿಸಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಕೂಡ ನನ್ನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರೂ ಒಟ್ಟಾಗಿಯೇ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೆವು. ರೆಸಿಗ್ನೇಶನ್ ವಾಪಸ್ ಪಡೆಯುವ ವಿಚಾರವಾಗಿಯೂ ಇಬ್ಬರೂ ಕೂಡಿ ನಿರ್ಧರಿಸುತ್ತೇವೆ. ಸುಧಾಕರ್ ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರು ವಾಪಸ್ ಬರುವ ನಿರೀಕ್ಷೆ ಇದೆ. ನಾಳೆ ಮಧ್ಯಾಹ್ನ 11 ಗಂಟೆಯೊಳಗೆ ಸುಧಾಕರ್ ಅವರನ್ನು ಸಂಪರ್ಕಿಸಿ ವಾಪಸ್ ಕರೆತರುತ್ತೇನೆ ಎಂದು ಎಂಟಿಬಿ ಭಪವಸೆ ಕೊಟ್ಟಿದ್ದರು.

ಒಂದೊಮ್ಮೆ ಸುಧಾಕರ್‌ ಲಭ್ಯವಾಗದಿದ್ದರೂ ಏನು ಮಾಡುತ್ತೀರಿ? ಎಂಬ ಮಾಧ್ಯಮದ ಪ್ರಶ್ನೆಗೆ, ಸುಧಾಕರ್ ಬರದಿದ್ದರೆ ನಾನೊಬ್ಬನೇ ಹೋಗಿ ಏನು ಮಾಡಲಿ? ಎಂಬ ಗೊಂದಲಮಯ ಹೇಳಿಕೆ ನೀಡಿದ್ದರು.

ಸಚಿವ ಡಿ.ಕೆ. ಶಿವಕುಮಾರ್ ನಿನ್ನೆ ಬೆಳಗಿನ ಜಾವ 4 ಗಂಟೆಯಿಂದ ಐದಾರು ಗಂಟೆಗೂ ಹೆಚ್ಚು ಕಾಲ ಸತತವಾಗಿ ಪ್ರಯತ್ನಿಸಿ ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸಿ, ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಕರೆ ತಂದಿದ್ದರು. ಇಲ್ಲಿಯೂ ಕೂಡ 4 ಗಂಟೆಗೂ ಹೆಚ್ಚು ಸಮಯ ಇವರ ಮನವೊಲಿಸುವ ಕಾರ್ಯ ನಡೆದಿತ್ತು. ಅಂತಿಮವಾಗಿ ಸಿಎಂ ಎಚ್​ಡಿ ಕುಮಾರಸ್ವಾಮಿ ಕೂಡ ಕಣಕ್ಕಿಳಿದು ಮನವೊಲಿಸುವ ಪ್ರಯತ್ನ ಮಾಡಿ, ರಾತ್ರಿ 10 ಗಂಟೆಗೆ ಸುದ್ದಿಗೋಷ್ಟಿ ನಡೆಸಿ ನಾಗರಾಜ್ ರಾಜೀನಾಮೆ ವಾಪಸ್ ಪಡೆಯುವ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ ಅದಾಗಿ ಅರ್ಧ ತಾಸಿಗೆ ಎಂಟಿಬಿ ನಾಗಾರಾಜ್​ ಮಾಧ್ಯಮದವರೊಂದಿಗೆ ತಮ್ಮ ರಾಜೀನಾಮೆ ನಿರ್ಧಾರ ವಿಚಾರದಲ್ಲಿ ಗೊಂದಲಮಯ ಹೇಳಿಕೆ ನೀಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮುಂಬೈಗೆ ವಿಮಾನ ಏರುವ ಮೂಲಕ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ನಿನ್ನೆ ದಿನವಿಡೀ ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದೆ. ತಮ್ಮ ರಾಜೀನಾಮೆಗೆ ಬದ್ಧವಾಗಿರುವ ರೀತಿಯಲ್ಲಿ ನಡೆದುಕೊಂಡಿರುವ ಎಂಟಿಬಿ ನಾಗರಾಜ್, ಕೊನೆಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ನೇತೃತ್ವದಲ್ಲಿ ಎಚ್​ಎಎಲ್ ತಲುಪಿ ಅಲ್ಲಿಂದ ಮುಂಬೈಗೆ ವಿಮಾನವೇರಿದ್ದಾರೆ. ನಾಗರಾಜ್ ಅವರೊಂದಿಗೆ ರಾಜೀನಾಮೆ ಸಲ್ಲಿಸಿದ್ದ ಶಾಸಕ ಡಾ.ಕೆ. ಸುಧಾಕರ್ ನಿನ್ನೆಯೇ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿಲ್ಲ. ಇದೀಗ ಎಂಟಿಬಿ ಕೂಡ ತೆರಳಿರುವ ಕಾರಣ ವಿಶ್ವಾಸಮತ ಗೆಲ್ಲುವ ಅತ್ಯುತ್ಸಾಹದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾದಂತಾಗಿದೆ.

For All Latest Updates

ABOUT THE AUTHOR

...view details