ಬೆಂಗಳೂರು :ಬಿಬಿಎಂಪಿ ಕೈಗೊಂಡಿರುವ ಈಜಿಪುರ ಮೇಲ್ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಇಂದು ಸಂಸದ ತೇಜಸ್ವಿ ಸೂರ್ಯ ಕಾಮಗಾರಿ ಪರಿಶೀಲನೆ ನಡೆಸಿ, ವಿಳಂಬದ ಬಗ್ಗೆ ಅಸಮಾಧಾನಗೊಂಡರು. ಬಿಬಿಎಂಪಿಯ ಕಾರ್ಯನಿರ್ವಹಣೆಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಜಿಪುರ ಫ್ಲೈ ಓವರ್ ಕಾಮಗಾರಿ ಪರಿಶೀಲನೆ ನಡೆಸಿದ ಸಂಸದ ತೇಜಸ್ವಿ ಸೂರ್ಯ 2.5 ಕಿಮೀ ಉದ್ದದ ಫ್ಲೈ ಓವರ್ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿದ್ದಾರೆ. ಈ 2.5 ಕಿಮೀ ಕಾಮಗಾರಿಯು ಕೇಂದ್ರೀಯ ಸದನದಿಂದ ಸೋನಿ ವರ್ಲ್ಡ್ ಜಂಕ್ಷನ್ ಮಾರ್ಗವಾಗಿ ಈಜಿಪುರವನ್ನು ಸಂಪರ್ಕಿಸಲಿದೆ.
2018ರಲ್ಲಿ ಶುರುವಾಗಿರುವ ಕಾಮಗಾರಿಗೆ 203 ಕೋಟಿ ರೂ. ವೆಚ್ಚದಲ್ಲಿ 30 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿತ್ತು. ಆದರೆ, ಕಾಮಗಾರಿಯ ವಿಳಂಬಕ್ಕೆ ಬಿಬಿಎಂಪಿ ಹಾಗೂ ಗುತ್ತಿಗೆ ಪಡೆದಿರುವ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಅಸಮರ್ಪಕ ಕಾರ್ಯನಿರ್ವಹಣೆ ಕಾರಣವಾಗಿದೆ.
ಈಜಿಪುರ ಫ್ಲೈ ಓವರ್ ಕಾಮಗಾರಿ ಪರಿಶೀಲನೆ ನಡೆಸಿದ ಸಂಸದ ತೇಜಸ್ವಿ ಸೂರ್ಯ ತೇಜಸ್ವಿ ಸೂರ್ಯ ಮಾತನಾಡಿ, ಬಹುದಿನಗಳಿಂದ ವಿಳಂಬಗೊಂಡಿರುವ ಈಜಿಪುರ ಫ್ಲೈಓವರ್ ಕಾಮಗಾರಿಯಿಂದ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಸಂಚರಿಸಲು ಸಾಕಷ್ಟು ಅನಾನುಕೂಲ ಉಂಟಾಗುತ್ತಿದೆ. ಈ ಕ್ಷಣದ ವರದಿಯಂತೆ ಕೇವಲ ಶೇ. 45ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ.
ಬಿಬಿಎಂಪಿ ವತಿಯಿಂದ ನೂತನವಾಗಿ ನಿಗದಿಗೊಂಡಿರುವ ಕಾಲಮಿತಿಯು 2023 ಜನವರಿಯ ತನಕ ಇದ್ದು, ಬಿಬಿಎಂಪಿಯ ಇಂತಹ ಬೇಜವಾಬ್ದಾರಿ ಕಾಮಗಾರಿ ನಿರ್ವಹಣೆಯನ್ನು ಒಪ್ಪಲಾಗದು. ಕಳೆದ 3 ವರ್ಷಗಳಲ್ಲಿ ಕೇವಲ ಶೇ.45ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 13 ತಿಂಗಳುಗಳಲ್ಲಿ ಉಳಿದಿರುವ ಶೇ.55ರಷ್ಟು ಕಾಮಗಾರಿ ಮುಗಿಸಲು ಸಾಧ್ಯವೇ ? ಗುತ್ತಿಗೆದಾರರೇ ಸಾರ್ವಜನಿಕರ ತೊಂದರೆಗೆ ಹೊಣೆಗಾರರು ಎಂದರು.
ಇಂತಹ ಸಣ್ಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ಸಾಧ್ಯವಾಗದ ಬಿಬಿಎಂಪಿಯ ಕಾರ್ಯನಿರ್ವಹಣೆ ನಿಜಕ್ಕೂ ಅದರ ಅಸಮರ್ಥತೆಗೆ ಸಾಕ್ಷಿ. ಇಡೀ ದೇಶಾದ್ಯಂತ ಕಾಶಿ, ನಾಗ್ಪುರ, ದೆಹಲಿ,ಹೈದರಾಬಾದ್ ಅಥವಾ ಚೆನ್ನೈ ನಗರಗಳಲ್ಲಿ ದೊಡ್ಡ ಪ್ರಮಾಣದ ಕಾರಿಡಾರ್‌ಗಳು, ಫ್ಲೈಓವರ್ ಗಳು, ಹೈವೇಗಳು ಕೆಲವೇ ವರ್ಷಗಳಲ್ಲಿ ತ್ವರಿತಗತಿಯಲ್ಲಿ ನಿರ್ಮಾಣಗೊಂಡಿರುವ ಉದಾಹರಣೆಗಳಿರುವಾಗ, ಬಿಬಿಎಂಪಿ ಮಾತ್ರ ಕೇವಲ 2.5 ಕಿಮೀ ಫ್ಲೈಓವರ್ ಕಾಮಗಾರಿಯನ್ನು 3 ವರ್ಷಗಳು ಮಿಕ್ಕಿದರೂ ಇನ್ನೂ ಶೇ. 45ರಷ್ಟು ಮಾತ್ರ ಮುಗಿಸಿರುವುದು ಅಕ್ಷಮ್ಯ.
ಈ ಕುರಿತು ಬಿಬಿಎಂಪಿ ಆಯುಕ್ತರಾಗಿರುವ ಶ್ರೀ ಗೌರವ್ ಗುಪ್ತರೊಂದಿಗೆ ನಾನು ಮಾತನಾಡಿದ್ದು, ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಅಗತ್ಯವಿದ್ದರೆ ಗುತ್ತಿಗೆದಾರರನ್ನು ಬದಲಿಸಲು ಸಹ ತಿಳಿಸಿದ್ದೇನೆ ಎಂದು ಸಂಸದರು ತಿಳಿಸಿದರು.