ಬೆಂಗಳೂರು: ಜೆಡಿಎಸ್ ಜತೆಗಿನ ಸೀಟು ಹಂಚಿಕೆಯನ್ನು ಯಾವುದೇ ಸಮಸ್ಯೆ ಇಲ್ಲದೆ ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಶೀಘ್ರದಲ್ಲೇ ದೇವೇಗೌಡರ ಜೊತೆ ಮತ್ತೆ ಚರ್ಚೆ ಮಾಡ್ತೇವೆ. ಯಾವುದೇ ಸಮಸ್ಯೆಯಿಲ್ಲದೆ ಇದನ್ನು ಬಗೆಹರಿಸಿಕೊಳ್ತೇವೆ. ಈಗಾಗಲೇ ದೇವೇಗೌಡರ ಜೊತೆಗೂ ಅದನ್ನೇ ಚರ್ಚಿಸಿದ್ದೇವೆ. ಆದಷ್ಟು ಬೇಗ ಸೀಟು ಹಂಚಿಕೆ ಬಗ್ಗೆ ದೇವೇಗೌಡರು ಸಹಮತ ವ್ಯಕ್ತಪಡಿಸುತ್ತಾರೆ. ಈ ಸಂಬಂಧ ಬೇರೆ ಬೇರೆ ವ್ಯಾಖ್ಯಾನ ಬೇಡ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ಮುಖಂಡರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ತರಾತುರಿಯಲ್ಲಿ ಬೆಂಗಳೂರಿಗೆ ಬಂದು ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ನಿನ್ನೆ ರಾತ್ರಿ ಕೆ ಸಿ ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ದರು. ಸಮಯವಿಲ್ಲದ ಕಾರಣ ಅವರು ಬೆಳಗ್ಗೆ ತೆರಳಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
ವೇಣುಗೋಪಾಲ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅವರು ಎಲ್ಲಾ ಕಡೆ ಓಡಾಡಬೇಕಿದೆ. 28 ರಂದು ಅಹಮದಾಬಾದ್ನಲ್ಲಿ ಕಾರ್ಯಕಾರಿಣಿ ಸಭೆ ಇದೆ. ಕಾರ್ಯಕ್ರಮಗಳ ಸಿದ್ಧತೆಗಾಗಿ ಅವರು ಓಡಾಡಬೇಕಿದೆ. ಹೀಗಾಗಿ ಅವರು ಬ್ಯುಸಿ ಆಗಿದ್ದಾರೆ ಎಂದರು.