ಬೆಂಗಳೂರು: ಇಂದು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯ ಕಾರ್ಯಕರ್ತರಿಗೆ ಅಭಿನಂದಿಸುವೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ. ರಾಮನಗರ ಘಟನೆ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಸೋಮವಾರ) ಸಿಎಂ ಸಭೆಯಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಸ್ವತಃ ಸಿಎಂ ನೀವು ಭಾಷಣ ಮಾಡಿದ್ದು ಸರಿ ಇಲ್ಲ, ಸಾಕು ಅಂತಾ ಹೇಳಿದರು. ಆದರೂ ಕರ್ನಾಟಕದ ಎಲ್ಲಾ ಯುವಕರಿಗೆ ಅವಮಾನ ಮಾಡುವ ಕೆಲಸವನ್ನು ಸಚಿವರು ಮಾಡಿದ್ದಾರೆ ಎಂದರು.
ಇದನ್ನೂ ಓದಿ:ರಾಮನಗರದ ವೇದಿಕೆಯಲ್ಲೇ ಕೈ-ಕಮಲ ಗಲಾಟೆ: ಸಚಿವರ ಆ ಮಾತುಗಳು ಜಟಾಪಟಿಗೆ ಕಾರಣವಾಯ್ತಾ?
ಮಾಧ್ಯಮಗಳ ವ್ಯಾಖ್ಯಾನ ನೋಡಿದ್ದೇನೆ. ಸಭೆಯನ್ನು ಹೊರತು ಪಡಿಸಿ ನಾವು ಬಿಜೆಪಿಯವರು, ನಾವು ಮಾಡೋದೇ ಹೀಗೆ, ಗಂಡಸಾದ್ರೆ ಬನ್ನಿ ಅಂತಾ ನನಗೆ ಸವಾಲು ಹಾಕಿದರು. ಅದು ನನಗೆ ಹಾಕಿದ ಸವಾಲಲ್ಲ. ರಾಮನಗರದ ಜನರಿಗೆ ಹಾಕಿದ ಸವಾಲು. ಕೆಂಪೇಗೌಡರು, ಅಂಬೇಡ್ಕರ್ಗೆ ಮಾಡಿದ ಅವಮಾನ. ಡಿ.ಕೆ. ಸುರೇಶ್ ಇಲ್ಲಿ ನೆಪ ಮಾತ್ರ, ರಾಮನಗರದ ಜನರ ಸ್ವಾಭಿಮಾನ ಕೆಣಕುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ದೂರಿದರು.
ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?
ಗಂಡಸುತನದ ಮಾತು ಯಾಕೆ ಬರುತ್ತೆ?. ಬಿಜೆಪಿ ರಾಜ್ಯಾಧ್ಯಕ್ಷರೇ ಗಂಡಸುತನದ ಬಗ್ಗೆ ಮಾತನಾಡುವುದು ನಿಮ್ಮ ಸಂಸ್ಕೃತಿಯೇ?. ಕುಮಾರಸ್ವಾಮಿ ಮಾಜಿ ಸಿಎಂ, ಅವರ ಬಗ್ಗೆ ಮಾತನಾಡಬೇಕಿಲ್ಲ. ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. ನಾನು ಮಾತಾನಾಡಬೇಕಿರುವುದು ಬಿಜೆಪಿಯವರ ಬಗ್ಗೆ ಮಾತಾಡಿದ್ದೇನೆ. ಗಂಡಸುತನದ ಬಗ್ಗೆ ಚರ್ಚೆ ಮಾಡಲು ಸಮಯ ನಿಗದಿ ಮಾಡಿ ಅಂತಾ ಸಿಎಂ ಎದುರೇ ಹೇಳಿದ್ದೇನೆ. ನಾನು ಪಲಾಯನ ಮಾಡಬೇಕಿಲ್ಲ ಎಂದರು.