ಬೆಂಗಳೂರು :ರಾಜ್ಯದಲ್ಲಿ ಸದ್ದು ಮಾಡಿರುವ 40% ಕಮಿಷನ್ ಆರೋಪದ ಬಗ್ಗೆ ಕೇಂದ್ರ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಇದರ ಬದಲಾಗಿ ಸಿಬಿಐ, ಐಟಿ ಇಲಾಖೆಯಿಂದ ತನಿಖೆ ನಡೆಸಿದ್ದರೆ ಎಲ್ಲ ಸತ್ಯಗಳು ಬಯಲಾಗುತ್ತಿದ್ದವು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 40% ಆರೋಪದ ಬಗ್ಗೆ ತನಿಖೆಗೆ ಕೇಂದ್ರ ಗೃಹ ಇಲಾಖೆ ಮುಂದಾಗಿರುವುದು ಕೇವಲ ಬೆದರಿಕೆಯ ತಂತ್ರಗಾರಿಕೆಯಾಗಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಬೇಕಿತ್ತು. ಆಗ ರಾಜ್ಯದ ಕಮಿಷನ್ ಬಗ್ಗೆ ಗೊತ್ತಾಗುತಿತ್ತು. ಬಿಜೆಪಿ ಶಾಸಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸಚಿವರ ಮೇಲೂ ಆರೋಪ ಇದೆ. ಪೊಲೀಸ್, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಳಹೊಕ್ಕು ನೋಡಿದರೆ ಕಮಿಷನ್ ದಂಧೆ ಬಗ್ಗೆ ಗೊತ್ತಾಗುತ್ತದೆ ಎಂದರು.
ಕೇಂದ್ರದ ವಿರುದ್ಧ ಟೀಕೆ :ಪ್ರತಿಪಕ್ಷಗಳನ್ನು ಹಣಿಯಲು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ(ಇಡಿ), ತೆರಿಗೆ ಇಲಾಖೆ(ಐಟಿ)ಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ 40% ಬಗ್ಗೆ ಮಾತನಾಡಿಲ್ಲ. ಈಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಹೆದರಿಸುವುದಕ್ಕೆ ಕರೆದಿರಬಹುದು ಎಂದು ಆಪಾದಿಸಿದರು.