ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರೆನ್ನಲಾದ ಸಂಸದ ನಳಿನ್ ಕುಮಾರ್ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಚಾರ್ಜ್ ಶೀರ್ಟ್ಗೆ ಹೈಕೋರ್ಟ್ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಚಾರ್ಜ್ ಶೀಟ್ ರದ್ದು ಕೋರಿ ನಳಿನ್ ಕುಮಾರ್ ಕಟೀಲ್ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆಯನ್ನು ಇಂದು ಹೈಕೋರ್ಟ್ನ ಏಕಸದಸ್ಯ ಪೀಠ ಕೈಗೆತ್ತಿಕೊಂಡಿತ್ತು.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ರಾಜಕೀಯ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಪ್ರಕರಣ ದಾಖಲಿಸುವಾಗ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಿ. ಆದೇಶ ಹೊರಡಿಸಿದೆ.
ಮಂಗಳೂರಿನಲ್ಲಿ ಕಾರ್ತಿಕ್ ಎಂಬುವರ ಕೊಲೆ ಪ್ರಕರಣದ ಆರೋಪಿಗಳನ್ನು ಹತ್ತು ದಿನದೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಇಡೀ ಜಿಲ್ಲೆಗೆ ಬೆಂಕಿಯಿಡುವುದಾಗಿ ಕೋಣಾಜೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಆವೇಶಭರಿತ ಮಾತುಗಳನ್ನಾಡಿದ್ದರು ಎಂಬ ಆರೋಪ ಇದಾಗಿದೆ.
ಈ ಸಂಬಂಧ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯ ಹಲವು ಬಾರಿ ಹಾಜರಾಗುವಂತೆ ಸಮನ್ಸ್ ಜಾರಿ ನೀಡಿದ್ದರೂ ನಳೀನ್ ಕುಮಾರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜನಪ್ರತಿನಿಧಿಗಳ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಜಾಮೀನುರಹಿತಬಂಧನ ವಾರೆಂಟ್ ಹೊರಡಿಸಿದ್ದರು. ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ.