ಬೆಂಗಳೂರು: ಒಂದು ಹನಿಯೂ ವ್ಯರ್ಥವಾಗದಂತೆ ಮುತುವರ್ಜಿ ವಹಿಸಬೇಕು. ಮುಂದಿನ ಪೀಳಿಗೆಗೆ ಶುದ್ಧ ಜಲ ದೊರೆಯುವುದನ್ನು ಖಾತರಿಪಡಿಸಿಕೊಳ್ಳುವಂತೆ ಖ್ಯಾತ ಜಲ ತಜ್ಞ ಹಾಗೂ ವಾಟರ್ ವಾರಿಯರ್ ಆಬಿಡ್ ಸುರ್ತಿ ಕರೆ ನೀಡಿದ್ದಾರೆ. ವಿಶ್ವ ಜಲ ದಿನಾಚರಣೆಯ ಅಂಗವಾಗಿ ಜಲ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ GROHE ಪ್ರತಿ ಹನಿಯೂ ಅಮೂಲ್ಯ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಕಳೆದ ಒಂದು ದಶಕದಲ್ಲಿ ಸುಮಾರು 20 ದಶಲಕ್ಷ ಲೀಟರ್ ನೀರು ಪೋಲಾಗುವುದನ್ನು ತಪ್ಪಿಸಿದ್ದೇನೆ. ದೇಶದಲ್ಲಿ ಹಸಿರು ಕಟ್ಟಡ ಮಾರ್ಗಸೂಚಿಗಳು, ನೀರು ಮರುಬಳಕೆ, ಮಳೆ ನೀರು ಕೊಯ್ಲು ಮತ್ತು ಇತರೆ ದೊಡ್ಡ ಮಟ್ಟದ ಯೋಜನೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾಗರಿಕರಾದ ನಾವು ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಡೆಯುವುದಕ್ಕೆ ಏನು ಮಾಡಬೇಕು? ಅಧ್ಯಯನಗಳ ಪ್ರಕಾರ, ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ಸೋರಿಕೆಯಾದರೆ ವರ್ಷಕ್ಕೆ 7800 ಲೀಟರ್ ಗಿಂತ ಅಧಿಕ ನೀರು ವ್ಯರ್ಥವಾಗುತ್ತದೆ!. ವಿಶೇಷವಾಗಿ ದೇಶದಲ್ಲಿ ಹೆಚ್ಚು ಭಾಗಗಳಲ್ಲಿ ನೀರು ಸಮರ್ಪಕವಾಗಿ ದೊರೆಯದೇ ಇರುವ ಸಂದರ್ಭದಲ್ಲಿ ಇದೊಂದು ದೊಡ್ಡ ನಷ್ಟವಾದಂತೆ ಎಂದು ಹೇಳಿದರು.